ಬೆಂಗಳೂರು : ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ, ಹಾಗೂ ಪರಿಸರ ಖಾತೆಯನ್ನು ನೀಡಲಾಗಿದೆ. ಆದರೆ ಈ ಖಾತೆ ವಿಚಾರಕ್ಕೆ ಮುನಿಸಿಕೊಂಡಿದ್ದ ಆನಂದ್ ಸಿಂಗ್ ಈ ಹಿಂದೆಯೂ ರಾಜೀನಾಮೆಯ ಎಚ್ಚರಿಕೆ ನೀಡಿದ್ದರು. ಅಲ್ಲದೇ ಇಂದು ಅಥವಾ ನಾಳೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಂದೇಶ ನೀಡಿದ್ದರು. ಆದರೆ ಇದೀಗ ರಾಜೀನಾಮೆಯಿಂದ ಆನಂದ್ ಸಿಂಗ್ ಹಿಂದೆ ಸರಿದಿದ್ದು, ನೀಡಿರುವ ಖಾತೆ ಜವಾಬ್ದಾರಿ ನಿರ್ವಹಿಸುವುದಾಗಿ ಆನಂದ್ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ವಿಕಾಸ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕಚೇರಿಗೆ ಹೋಗಿ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಅವರು ನೀವು ಮೊದಲು ಖಾತೆ ಕೆಲಸ ಪ್ರಾರಂಭ ಮಾಡಿ ಎಂದು ಹೇಳಿದ್ದಾರೆ. ರಾಜೀನಾಮೆ ನೀಡುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಖಾತೆ ಬದಲಾವಣೆ ಆಗಬೇಕೆಂದು ಹೇಳಿದ್ದು ನಿಜ. ಸಿಎಂ ನನ್ನ ಮಾತುಗಳನ್ನ ಕೇಳಿದ್ದು, ನಾನು ನಿಮ್ಮ ಮನವಿಯನ್ನು ಪರಿಗಣಿಸಿ ಸೂಕ್ತವಾದ ಕ್ರಮ ಕೈಗೊಂಡು, ಹೈಕಮಾಂಡ್ ಜೊತೆ ಮಾತನಾಡುತ್ತೇನೆ ಅಂತ ತಿಳಿಸಿದ್ದಾರೆ. ಹೀಗಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮಾತಿಗೆ ಬೆಲೆಕೊಟ್ಟು ಅಧಿಕಾರ ಸ್ವೀಕಾರ ಮಾಡುತ್ತೇನೆ ಎಂದಿದ್ದಾರೆ.










