‘ಸಿಐಡಿ’ ಧಾರಾವಾಹಿ ನಟ ದಿನೇಶ್ ಫಡ್ನಿಸ್ ನಿಧನ…

68
firstsuddi

ಹಿಂದಿ ಜನಪ್ರಿಯ ಧಾರಾವಾಹಿ ‘ಸಿಐಡಿ’ಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ‘ಸಿಐಡಿ ನಟ’ ಎಂದೇ ಖ್ಯಾತರಾಗಿದ್ದ ದಿನೇಶ್ ಫಡ್ನಿಸ್ ಅವರು ನಿಧನರಾಗಿದ್ದಾರೆ.

ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ದಿನೇಶ್ ಅವರಿಗೆ ಡಿಸೆಂಬರ್ 1ರಂದು ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನೇಶ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಸಿಐಡಿಯಲ್ಲಿ ದಯಾ ಪಾತ್ರವನ್ನು ನಿರ್ವಹಿಸುತ್ತಿದ್ದ ದಯಾನಂದ್ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.

ಡಿಟೆಕ್ಟೀವ್ ಕಥಾಹಂದರದ ‘ಸಿಐಡಿ’ ಧಾರಾವಾಹಿಯು 1998ರಿಂದ 2018ರ ತನಕ ಪ್ರಸಾರವಾಯಿತು. ಭಾರತೀಯ ಕಿರುತೆರೆತಲ್ಲಿ ಅತಿ ಹೆಚ್ಚು ಕಾಲ ಪ್ರಸಾರವಾದ ಸೀರಿಯಲ್​ಗಳಲ್ಲಿ ಇದು ಕೂಡ ಒಂದು. ಈ ಸೀರಿಯಲ್​ನಲ್ಲಿ ದಿನೇಶ್ ಫಡ್ನಿಸ್ ಅವರು ಮಾಡಿದ್ದ ಫ್ರೆಡ್ರಿಕ್ಸ್ ಎಂಬ ಪಾತ್ರವನ್ನು ಜನರು ತುಂಬ ಇಷ್ಟಪಟ್ಟಿದ್ದರು. ನಗು ಉಕ್ಕಿಸುವ ಕಾರಣದಿಂದ ಆ ಪಾತ್ರ ಫೇಮಸ್ ಆಗಿತ್ತು. ನಟನೆ ಮಾತ್ರವಲ್ಲದೇ ಇದೇ ಸೀರಿಯಲ್​ನ ಕೆಲವು ಸಂಚಿಕೆಗಳಿಗೆ ಬರಹಗಾರನಾಗಿಯೂ ದಿನೇಶ್ ಫಡ್ನಿಸ್ ಅವರು ಕೆಲಸ ಮಾಡಿದ್ದರು. ‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ ಸೀರಿಯಲ್​ನಲ್ಲಿ ಅವರು ಅತಿಥಿ ಪಾತ್ರವನ್ನೂ ಮಾಡಿದ್ದರು. ‘ಸೂಪರ್ 30’, ‘ಸರ್ಫರೋಷ್’ ಮುಂತಾದ ಸಿನಿಮಾಗಳಲ್ಲಿಯೂ ದಿನೇಶ್ ನಟಿಸಿದ್ದರು.

ದಿನೇಶ್ ಫಡ್ನಿಸ್ ನಿಧನಕ್ಕೆ ಅಭಿಮಾನಿಗಳು, ಆಪ್ತರು ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಲಾಗುತ್ತಿದೆ.