ಬೆಂಗಳೂರು : ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ನಿನ್ನೆ ರಮೇಶ್ ಜಾರಕಿಹೊಳಿ ಅವರಿಗೆ ಅಧಿಕಾರಿಗಳು ಸತತವಾಗಿ 4 ಗಂಟೆಗಳ ಕಾಲ ವಿಚಾರಣೆ ನಡೆಸಿದರು ಎಂಬ ಮಾಹಿತಿ ಲಭ್ಯವಾಗಿದೆ.
ಎಸ್ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಜಾರಕಿಹೊಳಿ ಅವರು ಈ ಪ್ರಕರಣಕ್ಕೂ ನನಗೂ ಸಂಬಂಧವೇ ಇಲ್ಲ ಎಂಬಂತೆ ಉತ್ತರ ನೀಡಿದ್ದು, ಸಿಡಿಯಲ್ಲಿರುವುದು ನಾನಲ್ಲ, ಆ ಯುವತಿ ಯಾರು ಅಂತ ನನಗೆ ಗೊತ್ತಿಲ್ಲ, ಅದು ನನ್ನ ಧ್ವನಿ ಅಲ್ಲ ಎಂದು ಉತ್ತರಿಸಿದ್ದಾರೆ.
ಜಾರಕಿಹೊಳಿ ಅವರಿಗೆ 15 ಆಡಿಯೋ ತುಣುಕುಗಳ ಬಗ್ಗೆ ಎಸ್ಐಟಿ ಅಧಿಕಾರಿಗಳು ಕೇಳಿದ್ದು, ನರೇಶ್, ಶ್ರವಣ್, ಆಕಾಶ್ ತಲವಾಡೆ, ಅಭಿಷೇಕ್ ಹಾಗೂ ಉದ್ಯಮಿಗಳಿಬ್ಬರ ಫೋಟೋ, ವೀಡಿಯೋ ತೋರಿಸಿ ವಿಚಾರಣೆ ನಡೆಸಿದ್ದಾರೆ. ಈ ಪ್ರಶ್ನೆಗಳಿಗೆ ಜಾರಕಿಹೊಳಿ ಅವರು, ಇವರ್ಯಾರು ನನಗೆ ಗೊತ್ತೇ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಸಿಡಿ ಬಿಡುಗಡೆಗೂ ಮುನ್ನ ಇದೇ ವಿಚಾರವಾಗಿ ಯಾರಾದರೂ ನಿಮ್ಮನ್ನು ಸಂಪರ್ಕಿಸಿದ್ದರೇ..? ಈ ವೇಳೆ ಹಣದ ಬಗ್ಗೆ ಡಿಮ್ಯಾಂಡ್ ಮಾಡಲಾಗಿತ್ತಾ..? ಎಂದು ರಮೇಶ್ ಜಾರಕಿಹೊಳಿ ಅವರನ್ನು ಎಸ್ಐಟಿ ತನಿಖಾಧಿಕಾರಿ ಧರ್ಮೇಂದ್ರ ಅವರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಜಾರಕಿಹೊಳಿ ಅವರು ನನ್ನ ಬಳಿ ಯಾರೂ ಬಂದಿಲ್ಲ, ನೇರವಾಗಿ ಹಣಕ್ಕೆ ಬೇಡಿಕೆ ಇಟ್ಟಿಲ್ಲ, ನನಗೆ ಮೊಬೈಲ್ ಬಗ್ಗೆ ತಿಳಿದಿಲ್ಲ, ನಾನು ಅನಕ್ಷರಸ್ಥ, ಈ ವಿಚಾರ ನನಗೆ ನಾಲ್ಕು ತಿಂಗಳ ಮೊದಲೇ ಗೊತ್ತಿತ್ತು, ಆದರೆ ಇದರ ಬಗ್ಗೆ ನಾನೂ ತಲೆ ಕೆಡಿಸಿಕೊಂಡಿರಲಿಲ್ಲ, ಅದೊಂದು ನಕಲಿ ವೀಡಿಯೋ ಎಂದಿದ್ದಾರೆ.
ಇನ್ನು ಇದೇ ವಿಷಯವನ್ನು ಇಟ್ಟುಕೊಂಡ ಎಸ್‍ಐಟಿ ಮಹಾನಾಯಕ ಯಾರೆಂದು ಹೇಳಿ ಎಂದಾಗ ಜಾರಕಿಹೊಳಿ ಅವರು ಆತ ಯಾರು ಎಂಬುದನ್ನು ನೀವೇ ತನಿಖೆ ಮಾಡಿ ಎಂದು ಅಧಿಕಾರಿಗಳಿಗೆ ತಿರುಗುಬಾಣ ಬಿಟ್ಟಿದ್ದಾರೆ. ಸಿಡಿ ನಕಲಿ ಎನ್ನುವುದಕ್ಕೆ ಸಾಕ್ಷಿ ಕೊಡಿ ಎಂದಾಗಲೂ ಆರೋಪದ ಬಗ್ಗೆ ನೀವೇ ತನಿಖೆ ಮಾಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.










