ಸಿದ್ದರಾಮಯ್ಯ ಆಡಿಯೋ ವೈರಲ್ – ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕೆ…

62
firstsuddi

ಬೆಂಗಳೂರು : ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ಉದ್ಘಾಟನೆ ಸಮಾರಂಭಕ್ಕೆ ಜನರ ಸೇರಿಸುವ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್ ಅವರೊಂದಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡುತ್ತಿರುವ ಆಡಿಯೋವೊಂದು ವೈರಲ್ ಆಗಿದ್ದು, ಕಾಂಗ್ರೆಸ್ ವಿರುದ್ಧ ಬಿಜೆಪಿ ಟೀಕೆ ಮಾಡಿದೆ.

ದುಡ್ಡು ಕೊಟ್ಟು ಜನರನ್ನು ಕರೆದು ತರುವುದು, ಅವರಿಗೆಲ್ಲ ಬಿಟ್ಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡುವುದು. ಆ ಕಡೆ ಅದೂ ಇಲ್ಲ, ಈ ಕಡೆ ಇದೂ ಇಲ್ಲ. ಕಾಂಗ್ರೆಸ್ ಕಥೆ ಈಗ ಮುಂಡಾಸು ಇಲ್ಲದಿರೋ ಮದುಮಗನ ಥರ ಆಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಬೆಳಗಾವಿಯ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಸಮಾವೇಶ ಮುಗಿಸಿ ಬಸ್ಸಿನಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್ ಸಿ ಚೆನ್ನರಾಜ ಹಟ್ಟಿಹೊಳಿ ಸೇರಿದಂತೆ ಇತರ ನಾಯಕರು ವಾಪಸ್ ಬರುತ್ತಿದ್ದರು.

ನೀವಿಬ್ಬರು ಸಮಾವೇಶಕ್ಕೆ ಬರಬೇಕು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಆಹ್ವಾನ ನೀಡಿದರು. ಚುನಾವಣೆ ಇರೋದ್ರಿಂದ ಅವರು ಜನರನ್ನು ಸೇರಿಸುತ್ತಾರೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ಈ ವೇಳೆ ಪ್ರತಿಯೊಬ್ಬರನ್ನು 500 ರೂಪಾಯಿ ಕೊಟ್ಟು ಕರೆದುಕೊಂಡು ಬರಬೇಕು ಎಂದು ಸಿದ್ದರಾಮಯ್ಯ ಹೇಳಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.