ಸಿಮ್ ಖರೀದಿಸಲು ಹೋಗಿದ್ದ ಮಲಯಾಳಂ ನಟಿ ಅನ್ನಾ ರಾಜನ್ ಅವರನ್ನು ಖಾಸಗಿ ಟೆಲಿಕಾಂ ಕಂಪನಿಯ ಸಿಬ್ಬಂದಿಯೊಬ್ಬರು ಶೋ ರೂಮ್ ನಲ್ಲಿ ಕೂಡಿ ಹಾಕಿರುವ ಘಟನೆ ಕೇರಳದಲ್ಲಿ ನಡೆದಿದೆ.
ಅಲುವಾದಲ್ಲಿರುವ ಟೆಲಿಕಾಂ ಶೋ ರೂಮ್ ಗೆ ಡೂಪ್ಲಿಕೇಟ್ ಸಿಮ್ ಖರೀದಿಸಲು ತೆರಳಿದಾಗ ಈ ಘಟನೆ ನಡೆದಿದ್ದು, ಈ ಬಗ್ಗೆ ನಟಿ ದೂರು ದಾಖಲಿಸಿದ್ದಾರೆ.
ನಕಲಿ ಸಿಮ್ ಖರೀದಿಸಲು ಶೋ ರೂಮ್ ಗೆ ಹೋಗಿದ್ದ ವೇಳೆ ಅಲ್ಲಿನ ಉದ್ಯೋಗಿಯೊಬ್ಬರು ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದರು. ಅಲ್ಲದೆ ಅವರು ಶೋ ರೂಮ್ನ ಶಟರ್ ಎಳೆದು ನನ್ನನ್ನು ಕೂಡಿ ಹಾಕಿದರು. ಈ ವೇಳೆ ನಾನು ಪ್ರಶ್ನಿಸಿದಾಗ ಬೆದರಿಕೆಯೊಡ್ಡಿದ್ದರು ಎಂದು ಅನ್ನಾ ರಾಜನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರಿನ ಬಳಿಕ ಅಲುವಾ ಪೊಲೀಸ್ ಠಾಣೆಗೆ ಟೆಲಿಕಾಂ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದ್ದು, ಈ ವೇಳೆ ಆತ ನನ್ನಲ್ಲಿ ಕ್ಷಮೆಯಾಚಿಸಿದ್ದಾನೆ. ಸಿಬ್ಬಂದಿಯ ಭವಿಷ್ಯ ದೃಷ್ಟಿಯಿಂದ ನಾನು ಪ್ರಕರಣವನ್ನು ಕೈ ಬಿಟ್ಟಿದ್ದೇನೆ ಎಂದು ಅನ್ನಾ ತಿಳಿಸಿದ್ದಾರೆ.
ಅಂಗಮಾಲಿ ಡೈರೀಸ್ ಚಿತ್ರದ ಮೂಲಕ ಮಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಅನ್ನಾ ರಾಜನ್ ಅವರು ಸಾಕಷ್ಟು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ.










