ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನ್ಯಾ. ಅರವಿಂದ್ ಕುಮಾರ್, ನ್ಯಾ. ರಾಜೇಶ್ ಬಿಂದಾಲ್ ಇಂದು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಸುಪ್ರೀಂಕೋರ್ಟ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು, ರಾಜೇಶ್ ಬಿಂದಾಲ್ ಮತ್ತು ಅರವಿಂದ್ ಕುಮಾರ್ ಅವರಿಗೆ ಪ್ರಮಾಣವಚನ ಬೋಧಿಸಿದರು.
ಈ ಇಬ್ಬರ ನೇಮಕದೊಂದಿಗೆ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ 34 ಆಗಿದೆ. ಕಳೆದ ವಾರ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್, ಸಂಜಯ್ ಕರೋಲ್, ಪಿವಿ ಸಂಜಯ್ ಕುಮಾರ್, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಮನೋಜ್ ಮಿಶ್ರಾ ಈ ಐವರನ್ನು ಸುಪ್ರೀಂಕೋರ್ಟ್ ನ ನೂತನ ನ್ಯಾಯಮೂರ್ತಿಗಳಾಗಿ ನೇಮಿಸಲಾಗಿತ್ತು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗುವ ಮೊದಲು ನ್ಯಾ. ರಾಜೇಶ್ ಬಿಂದಾಲ್ ಅವರು ಅಲಹಾಬಾದ್ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ದರು. ಇನ್ನು, ನ್ಯಾ. ಅರವಿಂದ್ ಕುಮಾರ್ ಅವರು ಕರ್ನಾಟಕದವರಾಗಿದ್ದು, ಗುಜರಾತ್ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಿದ್ದರು.
ನ್ಯಾ.ರಾಜೇಶ್ ಬಿಂದಾಲ್ ಹೆಸರು ಶಿಫಾರಸು ಮಾಡುವಾಗ ಅತಿದೊಡ್ಡ ಹೈಕೋರ್ಟ್ ಗಳಲ್ಲಿ ಒಂದಾಗಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗೆ ಸುಪ್ರೀಂ ಕೋರ್ಟ್ ನಲ್ಲಿ ಸಮರ್ಪಕವಾಗಿ ಪ್ರಾತಿನಿಧ್ಯವಿಲ್ಲ ಎಂದು ಕೊಲಿಜಿಯಂ ಗಮನಿಸಿತ್ತು. ಅಖಿಲ ಭಾರತ ಹಿರಿತನದ ಪ್ರಕಾರ, ನ್ಯಾ. ಅರವಿಂದ್ ಕುಮಾರ್ ಪ್ರಸ್ತುತ ಹೈಕೋರ್ಟ್ ನ್ಯಾಯಾಧೀಶರಲ್ಲಿ 26 ನೇ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. ಇದಲ್ಲದೆ, ಅವರು ಪ್ರಸ್ತುತ ಕರ್ನಾಟಕ ಹೈಕೋರ್ಟ್ ನಿಂದ ಬಂದಿರುವ ನ್ಯಾಯಮೂರ್ತಿಗಳಲ್ಲಿ ಎರಡನೇ ಹಿರಿಯ ನ್ಯಾಯಮೂರ್ತಿ ಎನಿಸಿಕೊಂಡಿದ್ದಾರೆ.










