ಚಿಕ್ಕಮಗಳೂರು : ಮಲೆನಾಡು ಭಾಗದ ಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಜಿಲ್ಲೆಯ ಕೊಪ್ಪ, ಎನ್.ಆರ್. ಪುರದಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಮೂಡಿಗೆರೆ ತಾಲ್ಲೂಕಿನ ಕುದುರೆಮುಖ, ಕಳಸ, ಕೆರೆಕಟ್ಟೆ, ಕಿಗ್ಗಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಬಾಳೂರು, ಚೆನ್ನಹಡ್ಲು, ಸುಂದರಬೈಲು, ಆಲೇಖಾನ್ ಹೊರಟ್ಟಿ, ಚಕ್ಕಮಕ್ಕಿ ಗ್ರಾಮಗಳಲ್ಲಿ ಭೂಮಿಯೊಳಗಿನಿಂದ ನಾಲ್ಕೈದು ಸೆಕೆಂಡ್ ಭಾರಿ ಶಬ್ದ ಕೇಳಿ ಬರುತ್ತಿದ್ದು, ಬೀಸುತ್ತಿರುವ ರಣ ಗಾಳಿ ಹಾಗೂ ಭಾರಿ ಮಳೆಯಿಂದ ಜನ ರಾತ್ರೋರಾತ್ರಿ ಮನೆ ಬಿಟ್ಟು ಹೊರಬರುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳೆದ ತಿಂಗಳು ಸುರಿದ ಭಾರಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಹೋಗಿದ್ದರೆ, ಎರಡನೇ ಬಾರಿ ಸುರಿಯುತ್ತಿರುವ ರಣಭೀಕರ ಮಳೆಯ ಅಬ್ಬರಕ್ಕೆ ಮನೆಯ ತಳಪಾಯ ಕುಸಿದು ಹೋಗುವಂತಾಗಿದೆ. ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಕುಸಿದಿದ್ದ ಬೆಟ್ಟ ಗುಡ್ಡಗಳ ಹಾಸುಪಾಸಿನಲ್ಲಿ ಮತ್ತೆ ಕುಸಿತ ಉಂಟಾಗುತ್ತಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ದಾರಿ ಕಾಣದಂತಾಗಿದೆ. ಗಾಳಿಯ ಅಬ್ಬರ ಜೋರಾಗಿರುವುದರಿಂದ ವಿದ್ಯುತ್ ಕಂಬ, ಮರಗಳು ಕೂಡಾ ಧರೆಗೆ ಉರುಳುತ್ತಿದ್ದು, ತಾಲ್ಲೂಕಿನ ಜನ ಕತ್ತಲಲ್ಲಿ ಬದುಕುವುದರ ಜೊತೆ ಗ್ರಾಮದಿಂದ ಹೊರಬರಲು ಕಷ್ಟಪಡುವಂತಾಗಿದೆ.
ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಆದರ್ಶ್ ತರುವೆ ಅವರು, ಮಲೆನಾಡಿಗೆ ಎರಡನೇ ರೌಂಡ್ ಕಾಲಿಟ್ಟಿರುವ ಜಲ ರಾಕ್ಷಸನಿಗೆ ಈ ಭಾರಿ ಗಾಳಿ ಕೂಡಾ ಬೇಷರತ್ ಬೆಂಬಲ ಕೊಟ್ಟಿದ್ದು, ಮೂರು ದಿನ ಕಳೆದಂತೆ ಮಳೆ ಪ್ರಮಾಣ ಜಾಸ್ತಿಯಾಗುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇದರೊಟ್ಟಿಗೆ ಕೆಲವು ಗ್ರಾಮಗಳಲ್ಲಿ ಭಾರಿ ಗಾಳಿ ಮಳೆಯೊಂದಿಗೆ ಭಾರಿ ಶಬ್ದ ಕೇಳಿ ಬರುತ್ತಿರುವುದು ಮಲೆನಾಡಿಗರಲ್ಲಿ ಆತಂಕ ಹೆಚ್ಚಿಸಿದೆ ಎಂದರು.









