‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸಿದ್ದ ಅನಿರುದ್ಧ್ ಅವರು ಕಾರಣಾಂತರಗಳಿಂದ ಆ ಧಾರಾವಾಹಿಯಿಂದ ಹೊರಬರಬೇಕಾಯಿತು. ಜೊತೆ ಜೊತೆಯಲಿ ಸೀರಿಯಲ್ ನಿಂದ ಅನಿರುದ್ಧ್ ಅವರು ಹೊರಬಂದಾಗ ಅವರನ್ನು ಕಿರಿತೆರೆಯಿಂದ ಬ್ಯಾನ್ ಮಾಡಬೇಕು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಆ ರೀತಿ ಏನೂ ಆಗಿಲ್ಲ. ಉದಯ ವಾಹಿನಿಯ ಹೊಸ ಧಾರಾವಾಹಿಯಲ್ಲಿ ನಟಿಸಲು ಸಜ್ಜಾಗಿದ್ದಾರೆ. ಈ ಸೀರಿಯಲ್ ಗೆ ‘ಸೂರ್ಯವಂಶ’ ಎಂದು ಹೆಸರು ಇಡಲಾಗಿದೆ.
ಈ ಕುರಿತು ಅನಿರುದ್ಧ್ ಅವರೇ ಸ್ಪಷ್ಟಪಡಿಸಿದ್ದಾರೆ. ‘ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ’ ಎಂದು ಬರೆದುಕೊಂಡಿದ್ದಾರೆ.
‘ಸೂರ್ಯವಂಶ’ ಎಂಬ ಹೆಸರು ಕೇಳಿದರೆ ವಿಷ್ಣುವರ್ಧನ್ ನೆನಪಾಗುತ್ತಾರೆ. ಈಗ ಅವರ ಅಳಿಯ ಅನಿರುದ್ಧ್ ಅವರ ಹೊಸ ಧಾರಾವಾಹಿಗೆ ಇದೇ ಶೀರ್ಷಿಕೆ ಇಟ್ಟಿರುವುದು ವಿಶೇಷ. ಅಂದು ‘ಸೂರ್ಯವಂಶ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಎಸ್. ನಾರಾಯಣ್ ಅವರೇ ಈಗ ಧಾರಾವಾಹಿಗೂ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿ ಧಾರಾವಾಹಿ ಬಗ್ಗೆ ಸಹಜವಾಗಿಯೇ ಕುತೂಹಲ ಮೂಡಿದೆ.










