ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ, ಕುಟುಂಬದವರ ಜೊತೆ ಪ್ರವಾಸ ಹೋಗಿದ್ದ ವೇಳೆ ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಸ್ಪಂದನಾ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ನಾಳೆ ನಡೆಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.
ಸ್ಪಂದನಾ ಅವರ ಮೃತದೇಹ ಇಂದು ರಾತ್ರಿ 11 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಅಲ್ಲಿಂದ ಸ್ಪಂದನಾ ಅವರ ನಿವಾಸಕ್ಕೆ ಮೃತದೇಹ ಬರಲಿದ್ದು, ಅಲ್ಲಿ ಪೂಜೆಯ ನಂತರ ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಮಲ್ಲೇಶ್ವರಂ ಆಟ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪಂದನಾ ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್ ತಿಳಿಸಿದ್ದಾರೆ.
ರಾತ್ರಿಯಿಂದಲೇ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದ್ದು, ನಾಳೆ ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಈಡಿಗ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಬಿ.ಕೆ ಹರಿಪ್ರಸಾದ್ ಹೇಳಿದರು. ಇಂದು ಮಧ್ಯಾಹ್ನದವರೆಗೂ ಥೈಲ್ಯಾಂಡ್ ನ ದೇಶದ ಕಸ್ಟಮ್ ಕ್ಲಿಯರೆನ್ಸ್ ಪ್ರಕ್ರಿಯೆಗಳು ನಡೆಯಲಿವೆ. ತದನಂತರ ಸ್ಪಂದನಾ ಮೃತದೇಹ ಕುಟುಂಬಕ್ಕೆ ಹಸ್ತಾಂತರವಾಗಲಿದೆ.
ಬ್ಯಾಂಕಾಕ್ನಲ್ಲಿ ವಿದೇಶಿ ಪ್ರಜೆಗಳು ಮೃತಪಟ್ಟರೆ ಅದಕ್ಕೆ ಹಲವು ಪ್ರಕ್ರಿಯೆಗಳನ್ನು ಪಾಲಿಸಬೇಕು. ಹಾಗೆ ಪಾಲಿಸಿದ ಬಳಿಕವೇ ಮೃತದೇಹವನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತದೆ. ವ್ಯಕ್ತಿ ಸತ್ತ ಬಳಿಕ ಮೊದಲು ಅವರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸ್ಥಳೀಯ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಯನ್ನು ತೆಗೆದುಕೊಳ್ಳುತ್ತಾರೆ. ಸಾವಿಗೆ ಕಾರಣ ಏನು ಎಂಬುದನ್ನು ಅವರು ತಿಳಿದುಕೊಳ್ಳುತ್ತಾರೆ. ಇದು ಸಹಜಸಾವು ಎಂದು ತಿಳಿದ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಆಗುತ್ತದೆ.
ಕುಟುಂಬದವರು ವೈದ್ಯಕೀಯ ವರದಿಯ ಜೊತೆ ಮರಣ ಪ್ರಮಾಣ ಪತ್ರ, ಪೊಲೀಸ್ ರಿಪೋರ್ಟ್ ಪಡೆದಿರಬೇಕು. ಮೃತರ ಪಾಸ್ಪೋರ್ಟ್, ವೀಸಾ ಪ್ರತಿ ಜೊತೆಗಿರಬೇಕು. ಇದನ್ನು ಥಾಯ್ಲೆಂಡ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ನೀಡಬೇಕು. ನಂತರ ಮೃತದೇಹ ರವಾನೆಗೆ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದುಕೊಳ್ಳಬೇಕು. ಬಳಿಕ ಈ ವರದಿಗಳನ್ನು ಏರ್ಪೋರ್ಟ್ನಲ್ಲಿ ಸಲ್ಲಿಸಬೇಕು. ಆ ಬಳಿಕವೇ ಥೈಲ್ಯಾಂಡ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ಮೃತದೇಹ ಹಸ್ತಾಂತರ ಮಾಡಬಹುದು.










