ಜೈಪುರ : ಹಂತಕರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಹತ್ಯೆಗೀಡಾದ ಟೈಲರ್ ಕನ್ಹಯ್ಯಲಾಲ್ ಪತ್ನಿ ಜಶೋದಾ ಆಗ್ರಹಿಸಿದ್ದಾರೆ.
ನಿನ್ನೆ ಇಬ್ಬರು ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾದ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅವರ ಅಂತ್ಯಕ್ರಿಯೆಯು ಇಂದು ತೀವ್ರ ಬಿಗಿ ಪೊಲೀಸ್ ಭದ್ರತೆಯಲ್ಲಿ ನೆರವೇರಿಸಲಾಯಿತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕನ್ಹಯ್ಯ ಪತ್ನಿ ಜಶೋದಾ, ನನ್ನ ಪತಿಗೆ ಕೊಲೆ ಬೆದರಿಕೆ ಕರೆ ಬಂದ ನಂತರ ಕೆಲವು ದಿನ ಅವರು ಕೆಲಸಕ್ಕೆ ಹೋಗಿರಲಿಲ್ಲ. ಮತ್ತೆ ಕೆಲಸಕ್ಕೆ ಹೋಗಬೇಕು ಎಂದು ನಿರ್ಧರಿಸಿ ನಿನ್ನೆ ಹೋಗಿದ್ದರು. ಈ ವೇಳೆ ಅವರನ್ನು ಹತ್ಯೆ ಮಾಡಲಾಗಿದೆ. ಹಂತಕರನ್ನು ಗಲ್ಲಿಗೇರಿಸಿ. ಇಂದು ನನ್ನ ಗಂಡನನ್ನು ಕೊಂದಿದ್ದಾರೆ. ನಾಳೆ ಇತರರನ್ನೂ ಕೊಲ್ಲುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.










