ಬೆಂಗಳೂರು : ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಬಗ್ಗೆ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ಅವರು ಅಚ್ಚರಿಯ ಹೇಳಿಕೆಯನ್ನು ನೀಡಿದ್ದು, ಹೇಳಿಕೆಯ ವೀಡಿಯೋ ಈಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ ಮಹಾರಾಷ್ಟ್ರದಲ್ಲಿ ಕೇವಲ 80ಗಂಟೆಗೆ ನಮ್ಮವರು ಮುಖ್ಯಮಂತ್ರಿ ಆಗಿದ್ದು ನಿಮಗೆಲ್ಲ ತಿಳಿದಿದೆ. ಬಳಿಕ ದೇವೇಂದ್ರ ಫಡ್ನವಿಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮಹಾರಾಷ್ಟ್ರ ಬಿಜೆಪಿಯಲ್ಲಿ ಬಹುಮತ ಇಲ್ಲ ಎಂದು ಎಲ್ಲರಿಗೂ ತಿಳಿದಿತ್ತು. ಆದರೂ ಮುಖ್ಯಮಂತ್ರಿಯಾಗಲು ಯಾಕೆ ಹೋದರು? ಮಹಾರಾಷ್ಟ್ರ ಮುಖ್ಯಮಂತ್ರಿ ನಿಧಿಯಲ್ಲಿ ಸುಮಾರು 40 ಸಾವಿರ ಕೋಟಿ ಹಣ ಉಳಿದಿತ್ತು. ಎನ್‍ಸಿಪಿ, ಕಾಂಗ್ರೆಸ್, ಶಿವಸೇನೆಯ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ಆ 40ಸಾವಿರ ಕೋಟಿ ಹಣ ಪೋಲಾಗುತ್ತದೆ ಎಂಬ ಕಾರಣಕ್ಕೆ ತರಾತುರಿಯಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ರಚನೆ ಮಾಡಿ 15 ಗಂಟೆಯೊಳಗೆ ಅದಷ್ಟೂ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಿದರು. ಹೀಗಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಯ ಡ್ರಾಮಾ ಮಾಡಬೇಕಾಯಿತು ಎಂದು ಸಂಸದ ಅನಂತ್ ಕುಮಾರ್ ಹೆಗ್ಡೆ ಅವರು ಅಚ್ಚರಿಯ ಹೇಳಿಕೆ ನೀಡಿದ್ದು, ಈ ಹೇಳಿಕೆ ಈಗಾ ಭಾರಿ ಚರ್ಚೆಗೆ ಗ್ರಾಸವಾಗಿದೆ.










