ನವದೆಹಲಿ: “ಅಕ್ಷರ ಸಂತ” ಎಂದೇ ಪ್ರಸಿದ್ಧರಾಗಿರುವ ಹರೇಕಳ ಹಾಜಬ್ಬ, ಹಾಲಕ್ಕಿ ಸಮುದಾಯದ ತುಳಸಿ ಗೌಡ ಅವರು ಸೇರಿದಂತೆ 21 ಮಂದಿಗೆ ಪದ್ಮ ಶ್ರೀ ಪ್ರಶಸ್ತಿ ಘೋಷಣೆಯಾಗಿದೆ. 71ನೇ ಗಣರಾಜ್ಯೋತ್ಸವದ ಮುನ್ನಾ ದಿನವಾದ ಶನಿವಾರ ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಹರೇಕಳ ಹಾಜಬ್ಬ ಅವರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಇವರಿಗೆ ಸಮಾಜಸೇವೆ (ಶಿಕ್ಷಣ) ಕ್ಷೇತ್ರದಲ್ಲಿ ಪ್ರಶಸ್ತಿ ಘೋಷಣೆಯಾಗಿದೆ. ಇವರು ಕಳೆದ 20 ವರ್ಷಗಳಿಂದ ದಕ್ಷಿಣ ಕನ್ನಡದ ಕೊಣಾಜೆ ಸಮೀಪದ ಹರೇಕಳ ನ್ಯೂ ಪಡ್ಪು ಗ್ರಾಮದಲ್ಲಿ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ತನಗಿಲ್ಲದ ವಿದ್ಯಾಭ್ಯಾಸ ತನ್ನ ಊರಿನ ಮಕ್ಕಳಿಗೆ ಸಿಗಬೇಕು ಎನ್ನುವ ಆಸೆಯಿಂದ ಕಿತ್ತಳೆ ಹಣ್ಣನ್ನು ಮಾರುತ್ತಿದ್ದ ಹರೇಕಳ ಹಾಜಬ್ಬ ಅವರು ಕಿತ್ತಳೆ ಮಾರಿ ಜೀವನ ಸಾಗಿಸಿ ಉಳಿದ ಹಣದಿಂದಲೇ ಅಂಗನವಾಡಿ ಆರಂಭಿಸುವ ಮೂಲಕ ಶಿಕ್ಷಣ ನೀಡುತ್ತಿದ್ದಾರೆ. ಹಾಜಬ್ಬ ಅವರ ಈ ಸಮಾಜಸೇವೆಯಿಂದ ಪದ್ಮ ಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಾಗೂ ಉತ್ತರ ಕನ್ನಡ ಜಿಲ್ಲೆಯ ‘ಅರಣ್ಯದ ವಿಶ್ವಕೋಶ’ ಎಂದೇ ಪ್ರಸಿದ್ಧಿ ಪಡೆದಿರುವ ತುಳಸಿ ಗೌಡ ಅವರಿಗೆ ಸಮಾಜ ಸೇವೆ (ಪರಿಸರ) ಕ್ಷೇತ್ರದಲ್ಲಿ ಪ್ರಶಸ್ತಿ ಘೋಷಣೆಯಾಗಿದೆ. 72 ವರ್ಷವಾದರೂ ಈಗಲೂ ಪರಿಸರ ಪ್ರೇಮವನ್ನು ತೋರುತ್ತಿರುವ ತುಳಸಿ ಗೌಡ ಅವರು ಸಸಿಗಳನ್ನು ನೆಟ್ಟು, ಅವು ಮರಗಳಾಗಿ ಬೆಳೆಯುವವರೆಗೂ ತನ್ನದೇ ಮಕ್ಕಳಂತೆ ಅವುಗಳನ್ನು ಪೋಷಿಸುತ್ತಾ ಬಂದಿದ್ದಾರೆ. ಅವರು ಯಾವ ಯಾವ ಸಸಿಯನ್ನು ಯಾವ ಸಮಯದಲ್ಲಿ ನೆಡಬೇಕು. ಯಾವ ಸಂದರ್ಭದಲ್ಲಿ ಹೂವು ಹಣ್ಣು ಬಿಡುತ್ತವೆ ಎಂಬುವುದನ್ನು ತಿಳಿದುಕೊಂಡಿದ್ದಾರೆ. ಮನೆಯಲ್ಲಿ ಬಡತನ, ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದರೂ ಕಳೆದ 60 ವರ್ಷಗಳಿಂದ ಪರಿಸರ ಪ್ರೇಮ ತೋರಿಸುತ್ತಿದ್ದು, ಲಕ್ಷಾಂತರ ಸಸಿಗಳನ್ನು ನೆಟ್ಟಿದ್ದು, ಇವರನ್ನು ಉತ್ತರ ಕನ್ನಡದಲ್ಲಿ ಮರಗಳ ವಿಜ್ಞಾನಿ ಎಂದೇ ಕರೆಯಲಾಗುತ್ತದೆ.










