ಹಾಲು, ನೀರು, ವಿದ್ಯುತ್ ದರ ಏರಿಕೆ ಬಗ್ಗೆ ಅವಸರದ ನಿರ್ಧಾರ ಮಾಡಲ್ಲ : ಸಿಎಂ.

61
firstsuddi

ಬೆಂಗಳೂರು : ಹಾಲು, ನೀರು, ವಿದ್ಯುತ್ ದರ ಏರಿಕೆ ಪ್ರಸ್ತಾಪಗಳ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ದರ ಏರಿಕೆಗಳ ಬಗ್ಗೆ ಇನ್ನೂ ಯಾವುದೇ ತೀರ್ಮಾನಗಳು ಆಗಿಲ್ಲ. ನಾವು ಎಲ್ಲ ಆಯಾಮಗಳಲ್ಲಿ ಅವಲೋಕಿಸಿ ನಂತರವೇ ನಿರ್ಧರಿಸುತ್ತೇವೆ. ಈ ವಿಚಾರದಲ್ಲಿ ಯಾವುದೇ ಅವಸರದ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆರ್.ಟಿ ನಗರದ ಖಾಸಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ ಒತ್ತಡಕ್ಕೋ ಮಣಿದು ನಾವು ವೀಕೆಂಡ್ ಕರ್ಫ್ಯೂ ವಾಪಸ್ ಪಡೆದಿಲ್ಲ. ಜನರ ಜೀವ ಉಳಿಯಬೇಕು, ಜೀವನವೂ ನಡೆಯಬೇಕು ಎನ್ನುವುದನ್ನು ಗಮನದಲ್ಲಿರಿಸಿಕೊಂಡು ತಜ್ಞರ ಅಭಿಪ್ರಾಯ ಪಡೆದು, ವೈಜ್ಞಾನಿಕ ಆಯಾಮದಲ್ಲಿ ಚರ್ಚಿಸಿ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಸಮಸ್ಯೆಗಳು ಮತ್ತು ನ್ಯಾಯಾಲಯದಲ್ಲಿ ವ್ಯಾಜ್ಯಗಳ ಕುರಿತು ವಿಡಿಯೋ ಸಂವಾದದ ಮೂಲಕ ಇಂದು ಸಭೆ ನಡೆಸಲಾಗುತ್ತದೆ. ದೆಹಲಿಯಿಂದ ನಮ್ಮ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ನಮ್ಮ ಅಡ್ವೋಕೆಟ್ ಜನರಲ್, ನೀರಾವರಿ ಇಲಾಖೆ ತಾಂತ್ರಿಕ ತಜ್ಞರು ಕೂಡ ಭಾಗವಹಿಸಲಿದ್ದಾರೆ ಎಂದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಕೊರೊನಾ ದೃಢಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇವೇಗೌಡರೊಂದಿಗೆ ಮಾತನಾಡುತ್ತೇನೆ. ಅವರ ಕುಟುಂಬ, ಮಣಿಪಾಲ್ ವೈದ್ಯರ ಜೊತೆಗೂ ಮಾತಾಡುತ್ತೇನೆ. ಈ ವಯಸ್ಸಲ್ಲೂ ಅವರು ಆರೋಗ್ಯವಾಗಿದ್ದಾರೆ. ಆದರೆ ಕೋವಿಡ್ ಯಾರನ್ನೂ ಬಿಟ್ಟಿಲ್ಲ. ಹೆಚ್.ಡಿ.ದೇವೇಗೌಡರಿಗೆ ಕೊರೊನಾ ತೀವ್ರತೆ ಇರುವುದಿಲ್ಲ ಎಂದು ಹೇಳಿದ್ದಾರೆ.