ತಿರುವನಂತಪುರಂ : ಶಾಲಾ ಕೊಠಡಿಯಲ್ಲಿ ಹಾವು ಕಚ್ಚಿ ಬಾಲಕಿ ಮೃತಪಟ್ಟಿರುವ ಘಟನೆ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯಲ್ಲಿ ನಡೆದಿದೆ. ಶೆಹೆಲಾ ಶರ್ಲಿನ್(10) ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಬಾಲಕಿಗೆ ಹಾವು ಕಚ್ಚಿದ ಕೂಡಲೇ ವಿದ್ಯಾರ್ಥಿಗಳು ಹಾವು ಕಚ್ಚಿದೆ ಎಂದು ಶಿಕ್ಷಕಿಗೆ ಹೇಳಿದ್ದಾರೆ. ಆದರೆ ಇದನ್ನು ನಂಬದ ಶಿಕ್ಷಕಿ ಉಗುರು ತಾಗಿಸಿಕೊಂಡು ಗಾಯವಾಗಿರಬೇಕು ಎಂದು ಹೇಳಿ ಪಾಠವನ್ನು ಮುಂದುವರೆಸಿದ್ದಾರೆ. ಕೆಲವು ನಿಮಿಷ ಕಳೆದ ಬಳಿಕ ಬಾಲಕಿಯ ಕಾಲು ನೀಲಿ ಬಣ್ಣಕ್ಕೆ ತಿರುಗಿದೆ ಎಂದು ಶಿಕ್ಷಕಿಗೆ ಹೇಳಿದರೆ ಬಾಲಕಿಯ ತಂದೆ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಎಂದು ನಿರ್ಲಕ್ಷ ತೋರಿದ್ದಾರೆ. ಬಳಿಕ ಬಾಲಕಿಯ ತಂದೆ ಬಂದು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ವೇಳೆ ಪರಿಸ್ಥಿತಿ ಕೈಮೀರಿದೆ ಇಲ್ಲಿ ಚಿಕಿತ್ಸೆ ಆಗುವುದಿಲ್ಲ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಅದರಂತೆ ಬಾಲಕಿಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದು, ಶಾಲಾ ಶಿಕ್ಷಕಿಯ ವಿರುದ್ಧ ಬಾಲಕಿಯ ಪೋಷಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.










