ಹಾಸನ: ಹಾಸನ ವಿಧಾನಸಭೆ ಟಿಕೆಟ್ ವಿಚಾರವಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಕುಟುಂಬದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದರ ಮಧ್ಯೆ ಹೆಚ್.ಡಿ ರೇವಣ್ಣ ಅವರು ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಕ್ಕೆ ನಾನು ರೆಡಿ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹಾಸನ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಹೆಚ್.ಡಿ.ರೇವಣ್ಣ ಸ್ಪರ್ಧಿಸಿ ಗೆಲ್ಲಲಿ. 50,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುತ್ತೇನೆ. ಒಂದು ಮತ ಕಡಿಮೆಯಾದ್ರೂ ಮತ್ತೆ ಚುನಾವಣೆಗೆ ಹೋಗುತ್ತೇನೆಂದು ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿರುವ ರೇವಣ್ಣ, ಪಕ್ಷ ಹೇಳಿದ್ರೆ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಕ್ಕೆ ನಾನು ರೆಡಿ. ಶಾಸಕ ಪ್ರೀತಂಗೌಡ ಸವಾಲು ಸ್ವೀಕರಿಸಿದ್ದೇನೆ ಎಂದರು.
ಭವಾನಿ ರೇವಣ್ಣ ಹಾಸನ ಟಿಕೆಟ್ ಬಯಸಿದ್ರು. ಆದ್ರೆ ಕುಮಾರಸ್ವಾಮಿ ಆಗಲ್ಲ ಅಂದಿದ್ರು. ಪಕ್ಷ ಏನ್ ಹೇಳತ್ತೆ ಅದೇನ್ ಕೇಳ್ತಿನಿ. ಈಗ ಪಕ್ಷಕ್ಕೆ ಬಿಟ್ಟಿದ್ದೀನಿ. ನಮಗೇನು ಎಲ್ಲಿ ನಿಲ್ಸಿದ್ರು ರೆಡಿ ನಾನು. ಯಾವ ಊರಲ್ಲಿ ಟಿಕೆಟ್ ಕೊಟ್ರು ರೆಡಿ ಇರ್ತೀವಿ. ಪಕ್ಷ ಡೆಲ್ಲಿಲಿ ನಿಲ್ಲು ಅಂದ್ರು ನಿಲ್ತೀನಿ. ಕೆಲವರು ಹಾಕಿರುವ ಚಾಲೆಂಜ್ ಸ್ವೀಕಾರ ಮಾಡಬೇಕಲ್ವಾ ಎಂದು ಹೇಳಿದ್ದಾರೆ.
ಹೆಚ್.ಡಿ ರೇವಣ್ಣ ಅವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಮುಂದಾಗಿದ್ದಾರೆ. ರಾಜಕೀಯ ವೈರಿ ಪ್ರೀತಂಗೌಡ ಅವರನ್ನು ಸೋಲಿಸಲೇಬೇಕೆಂದು ರೇವಣ್ಣ ಹಠಕ್ಕೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಕುಟುಂಬಕ್ಕೆ ಟಿಕೆಟ್ ಸಿಕ್ಕಂತೆ ಮಾತ್ರ ಪ್ರೀತಂ ಸೋಲಿಸಲು ಸುಲಭ ಎನ್ನುವುದು ರೇವಣ್ಣ ಅಭಿಪ್ರಾಯವಾಗಿದೆ. ಇದರಿಂದ ಭವಾನಿ ರೇವಣ್ಣಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದಾರೆ. ಆದ್ರೆ, ಇದಕ್ಕೆ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕಾಗಿಯೇ ರೇವಣ್ಣ ಹಾಸನದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.










