ಹಾಸನ : ಚಾಲಕನ ನಿಯಂತ್ರಣ ತಪ್ಪಿ ಕೆ.ಎಸ್.ಆರ್.ಟಿ.ಸಿ. ಪಲ್ಟಿಯಾಗಿ ಓರ್ವ ಮೃತಪಟ್ಟು, 25ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜೆಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಪಟ್ಟಣದ ಶ್ರೀಕಂಠಯ್ಯ ಸರ್ಕಲ್ ಬಳಿ ನಡೆದಿದೆ. ಬಂಟ್ವಾಳ ತಾಲ್ಲೂಕಿನ ಮಾಣಿ ಗ್ರಾಮದ ನಿವಾಸಿ ಅಭಿಷೇಕ್(29) ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಶ್ರೀಕಂಠಯ್ಯ ವೃತ್ತದ ಬಳಿ ಹಾಕಲಾಗಿರುವ ಸ್ಪೀಡ್ ಬ್ರೇಕರ್ ಮೇಲೆ ಚಾಲಕ ವೇಗವಾಗಿ ಬಸ್ ಚಲಾಯಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು, ಬಳಿಕ ಸರ್ವೀಸ್ ರಸ್ತೆಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಓರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಬೆಳ್ಳೂರು ಕ್ರಾಸ್ ಹಾಗೂ ಹಿರೀಸಾವೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದ್ದು, ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.









