ಹಿಂದೂ ಸಭಾ ದೇವಾಲಯದ ಮೇಲೆ ಖಲಿಸ್ತಾನಿಗಳ ಅಟ್ಟಹಾಸ ಖಂಡಿಸಿ ಕೆನಡಾದಲ್ಲಿ ಹಿಂದೂಗಳಿಂದ ಬೃಹತ್ ಪ್ರತಿಭಟನೆ.

22

ಕೆನಡಾ : ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಅಟ್ಟಹಾಸ ಖಂಡಿಸಿ ಕೆನಡಾದ ಬ್ರಾಂಪ್ಟನ್‍ನಲ್ಲಿರುವ ಹಿಂದೂ ಸಭಾ ಮಂದಿರದ ಹೊರಗೆ ಸಾವಿರಕ್ಕೂ ಹೆಚ್ಚು ಕೆನಡಾದ ಹಿಂದೂಗಳು ನಿನ್ನೆ ಸಂಜೆ ಪ್ರತಿಭಟನೆ ನಡೆಸಿದರು. ಭಾರತ ಮತ್ತು ಕೆನಡಾದ ಧ್ವಜಗಳನ್ನು ಹಿಡಿದು ದೇವಾಲಯದ ಹೊರಗೆ ಖಾಲಿಸ್ತಾನಿ ಉಗ್ರರ ವಿರುದ್ಧ ಘೋಷಣೆ ಕೂಗಿದರು. ರಾಜಕಾರಣಿಗಳು ಖಲಿಸ್ತಾನಿಗಳಿಗೆ ಬೆಂಬಲ ನೀಡದಂತೆಯೂ ಆಗ್ರಹಿಸಿದರು.
ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ ಹಿಂದೂ ದೇವಾಲಯಗಳ ಮೇಲೆ ಹೆಚ್ಚುತ್ತಿರುವ ಭೀಕರ ದಾಳಿಗಳ ವಿರುದ್ಧ ಪ್ರತಿಭಟಿಸಲು ಬ್ರಾಂಪ್ಟನ್‍ನಲ್ಲಿ ಸಾವಿರಕ್ಕೂ ಹೆಚ್ಚು ಕೆನಡಿಯನ್ ಹಿಂದೂಗಳು ಜಮಾಯಿಸಿದ್ದರು. ಪವಿತ್ರ ದೀಪಾವಳಿಯ ವಾರಾಂತ್ಯದಲ್ಲಿ ಕೆನಡಾದ ಹಿಂದೂ ದೇವಾಲಯಗಳ ಮೇಲೆ ಖಾಲಿಸ್ತಾನಿ ಉಗ್ರರು ನಡೆಸಿದ ದಾಳಿ ಬಹಳ ಕ್ರೂರತನದ್ದು. ಇಂಥ ದಾಳಿಯನ್ನು ತಡೆಗಟ್ಟುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇವೆ” ಎಂದು ಹೇಳಿಕೊಂಡಿದೆ. ಈ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ತೀವ್ರವಾಗಿ ಖಂಡಿಸಿದ್ದಾರೆ. ಇದನ್ನು ಉದ್ದೇಶಪೂರ್ವಕ ಕೃತ್ಯ ಎಂದು ಕರೆದಿರುವ ಅವರು, ಭಾರತೀಯ ರಾಯಭಾರಿಗಳನ್ನು ಬೆದರಿಸುವ ಪ್ರಯತ್ನ ಎಂದಿದ್ದಾರೆ. ಅಲ್ಲದೇ ಕಾನೂನು ಸುವ್ಯವಸ್ಥೆಯನ್ನು ಎತ್ತಿಹಿಡಿಯುವಂತೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.