ಹಿಜಾಬ್ ಹಾಕದೆ ಬರಲು ಸಿದ್ಧವಿಲ್ಲದಿದ್ದರೆ ಕಾಲೇಜು ಆವರಣದೊಳಗೆ ಬರಬೇಡಿ : ರಘುಪತಿ ಭಟ್.

101
firstsuddi

ಉಡುಪಿ : ಹಿಜಾಬ್ ಧರಿಸದೆ ಬರಲು ಸಿದ್ಧವಿಲ್ಲ ಎಂದಾದರೆ ಅಂತಹ ವಿದ್ಯಾರ್ಥಿನಿಯರು ನಾಳೆಯಿಂದ ಕಾಲೇಜು ಆವರಣಕ್ಕೆ ಬರಬೇಡಿ ಎಂದು ಉಡುಪಿ ಶಾಸಕ ಹಾಗೂ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಘುಪತಿ ಭಟ್ ತಿಳಿಸಿದ್ದಾರೆ.

ಇಂದು ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಹಿಜಾಬ್ ಕುರಿತು ನಡೆದ ಅಭಿವೃದ್ಧಿ ಸಮಿತಿ, ಪೋಷಕರು ಹಾಗೂ ವಿದ್ಯಾರ್ಥಿನಿಯರು, ಉಪನ್ಯಾಸಕರು ಹಾಗೂ ಮುಸ್ಲಿಂ ಮುಖಂಡರ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಂತದಲ್ಲಿ ನಮಗೆ ಯಾವುದೇ ನಿರ್ಧಾರ ಪ್ರಕಟಿಸಲು ಸಾಧ್ಯವಿಲ್ಲ. ಸರ್ಕಾರದ ಸಮಿತಿ ಯಾವ ನಿರ್ಧಾರವನ್ನು ಕೈಗೊಳ್ಳುತ್ತೆ ಅದುವರೆಗೆ ಕಾಯಬೇಕು ಎಂದು ವಿದ್ಯಾರ್ಥಿನಿಯರಿಗೆ ಮತ್ತು ಅವರ ಪೋಷಕರಿಗೆ ತಿಳಿಸಲಾಗಿದೆ. ಅಷ್ಟರವರೆಗೆ ಹಿಂದೆ ಬರುತ್ತಿದ್ದ ರೀತಿಯಲ್ಲಿ ಕಂಪೌಂಡ್ ಒಳಗೆ ತನಕ ಹಿಜಾಬ್ ಹಾಕಿಕೊಂಡು ಬಂದು ತರಗತಿಯಲ್ಲಿ ಹಿಜಾಬ್ ಇಲ್ಲದೆ ಕುಳಿತು ಪಾಠ ಕೇಳಬೇಕು ಎಂದು ಸೂಚಿಸಲಾಗಿದೆ.

ನಾಳೆಯಿಂದ ಹಿಜಾಬ್ ಧರಿಸದೆ ಬರುತ್ತೇವೆ ಎಂಬ ನಿರ್ಧಾರ ಮಾಡಿದ್ದರೆ ಮಾತ್ರ ಕಾಲೇಜಿಗೆ ಬನ್ನಿ ಇಲ್ಲವಾದರೆ ದಯವಿಟ್ಟು ಬರಬೇಡಿ. ಇಲ್ಲಿ ಬಂದು ಕಾಲೇಜಿನ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡಬೇಡಿ. ಪೊಲೀಸ್ ಇಲಾಖೆಗೆ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು ನಾಳೆಯಿಂದ ಕಾಲೇಜು ಆವರಣದಲ್ಲಿ ಹಿಜಾಬ್ ವಿಚಾರ ಎತ್ತಿಕೊಂಡು ಬೇರೆ ಬೇರೆ ಸಂಘಟನೆಗಳು, ಮಾಧ್ಯಮದವರಿಗೆ ಕಾಲೇಜಿಗೆ ಪ್ರವೇಶ ನೀಡಬಾರದು ಎಂದು ಸೂಚಿಸಲಾಗಿದೆ. ಈ ಕುರಿತು ಕಾಲೇಜು ಅಭಿವೃದ್ಧಿ ಸಮಿತಿ ಸ್ಪಷ್ಟ ನಿರ್ಣಯ ಕೈಗೊಂಡಿದೆ. ಯಾರಿಗಾದರೂ ಏನೇ ಮನವಿ ಹಾಗೂ ಇನ್ನಿತರ ವಿಚಾರಗಳಿದ್ದರೆ ನೇರವಾಗಿ ಜಿಲ್ಲಾಧಿಕಾರಿಗಳಿಗೆ ನೀಡಲಿ. ನಾಳೆಯಿಂದ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ, ಯಾರು ಶಿಸ್ತನ್ನು ಪಾಲಿಸುತ್ತಾರೆ ಅವರು ಬರಬಹುದು ಎಂದು ತಿಳಿಸಿದರು.