ಬೆಂಗಳೂರು : ಸಚಿವ ಆನಂದ್ ಸಿಂಗ್ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿ ಸಚಿವರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು. ಇದರ ಬೆನ್ನಲ್ಲೇ ಇಂದು ಕೆಪಿಸಿಸಿ ಅಧ್ಯಕ್ಷರ ಸದಾಶಿವನಗರ ನಿವಾಸಕ್ಕೆ ಭೇಟಿ ಕೊಟ್ಟ ಸಚಿವ ಆನಂದ್ ಸಿಂಗ್ ಸುದೀರ್ಘ ಸಮಾಲೋಚನೆ ನಡೆಸಿದ್ದು, ಭಾರೀ ಕುತೂಹಲ ಮೂಡಿಸಿದೆ.
ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಡಿ. ಕೆ ಶಿವಕುಮಾರ್ ಅವರು, ಮೇಕೆದಾಟು ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದಾರೆ. ಆನಂದ್ ಸಿಂಗ್ ನನ್ನ ಮನೆಗೆ ಬಂದಿದ್ದಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ. ನಾವು ರಾಜಕೀಯ ಮಾತಾಡೋದಿದ್ದರೆ ರೆಸಾರ್ಟ್ ಗಳಲ್ಲಿ, ಹೋಟೆಲ್ ಗಳಲ್ಲಿ ಮಾಡ್ತೇವೆ. ಇಲ್ಲಿ ಮನೆಯಲ್ಲಿ ನೇರವಾಗಿ ಬಂದು ಅದೆಲ್ಲ ಮಾತಾಡೊಲ್ಲ. ಆ ಕಾಮನ್ ಸೆನ್ಸ್ ನಮಗೂ ಇರಬೇಕು, ನಿಮಗೂ ಇರಬೇಕು ಎಂದು ಖಾರವಾಗಿ ಉತ್ತರಿಸಿದರು.










