ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ರಾಜ್ಯಸಭಾ ಚುನಾವಣೆ ಫಲಿತಾಂಶದ ಬಳಿಕ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಹಿಮಾಚಲ ಪ್ರದೇಶ ವಿಧಾನಸಭೆ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರು ಸ್ಪೀಕರ್ ಚೇಂಬರ್ನಲ್ಲಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಪ್ರತಿಪಕ್ಷ ನಾಯಕ ಜೈರಾಮ್ ಠಾಕೂರ್ ಸೇರಿದಂತೆ 15 ಬಿಜೆಪಿ ಶಾಸಕರನ್ನು ಬುಧವಾರ ಅಮಾನತುಗೊಳಿಸಿದ್ದಾರೆ.
ವಿಪಿನ್ ಸಿಂಗ್ ಪರ್ಮಾರ್, ರಣಧೀರ್ ಶರ್ಮಾ, ಲೋಕೇಂದರ್ ಕುಮಾರ್, ವಿನೋದ್ ಕುಮಾರ್, ಹನ್ಸ್ ರಾಜ್, ಜನಕ್ ರಾಜ್, ಬಲ್ಬೀರ್ ವರ್ಮಾ, ತ್ರಿಲೋಕ್ ಜಮ್ವಾಲ್, ಸುರೇಂದರ್ ಶೋರಿ, ದೀಪ್ ರಾಜ್, ಪುರಣ್ ಠಾಕೂರ್, ಇಂದರ್ ಸಿಂಗ್ ಗಾಂಧಿ, ದಿಲೀಪ್ ಠಾಕೂರ್ ಮತ್ತು ಇಂದರ್ ಸಿಂಗ್ ಅಮಾನತುಗೊಂಡಿದ್ದಾರೆ.
ಸದನದಲ್ಲಿ ಗದ್ದಲ ಎಬ್ಬಿಸಿದಕ್ಕಾಗಿ ಹಾಗೂ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ. ಆದರೆ ಇದು ಅನ್ಯಾಯದ ಕ್ರಮ ಎಂದು ಬಿಜೆಪಿ ಹೇಳುತ್ತಿದ್ದು, ಕಾಂಗ್ರೆಸ್ ಸರ್ಕಾರವನ್ನು ಉಳಿಸಲು ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ದೂರಿದ್ದಾರೆ. ಇಂದು ಬೆಳಗ್ಗೆಯೇ ಜೈ ರಾಮ್ ಠಾಕೂರ್ ನೇತೃತ್ವದ ಬಿಜೆಪಿ ನಾಯಕರು ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರನ್ನು ಭೇಟಿ ಮಾಡಿದ್ದಾರೆ.
ಹಿಮಾಚಲ ಪ್ರದೇಶದ ಏಕೈಕ ರಾಜ್ಯಸಭಾ ಸ್ಥಾನವನ್ನು ನಿನ್ನೆ ಬಿಜೆಪಿ ಗೆದ್ದುಕೊಂಡಿದೆ. ಈ ಅನಿರೀಕ್ಷಿತ ಫಲಿತಾಂಶದಿಂದ ಕಾಂಗ್ರೆಸ್ಗೆ ಆಘಾತ ಎದುರಾಗಿದೆ.










