ಚಿಕ್ಕಮಗಳೂರು- ಕರ್ನಾಟಕ ಸಂಗೀತದ ಪಿತಾಮಹ ಸಂತ ಶ್ರೀ ತ್ಯಾಗರಾಜರು ದಾಸಶ್ರೇಷ್ಠ ಪುರಂದರದಾಸರು ಮತ್ತು ಕನಕದಾಸರ ಆರಾಧನಾ ಮಹೋತ್ಸವ ಸಾಂಸ್ಕøತಿಕ ಸಂಘದ ಆಶ್ರಯದಲ್ಲಿ ಇಲ್ಲಿನ ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯದಲ್ಲಿ ಭಾನುವಾರ ಶ್ರದ್ದಾ ಭಕ್ತಿಯಿಂದ ನಡೆಯಿತು.
ಹಾಸನ ಜಿಲ್ಲೆ ಮತ್ತು ಸ್ಥಳೀಯ ಸಂಗೀತಗಾರರು ಆರಾಧನೆ ಪ್ರಯುಕ್ತ ಬೆಳಿಗ್ಗೆ ಶ್ರೀ ತ್ಯಾಗರಾಜರು ಮತ್ತು ಪುರಂದರದಾಸರ ವೇಷಧಾರಿಗಳು ಹಾಗೂ ಭಾವಚಿತ್ರದೊಂದಿಗೆ ಪಿಳ್ಳಾರಿ ಗೀತೆಗಳು ಮತ್ತು ಉತ್ಸವ ಸಂಪ್ರದಾಯ ಕೃತಿಗಳನ್ನು ಹಾಡುತ್ತಾ ಗ್ರಾಮದಲ್ಲಿ ಊಂಛವೃತ್ತಿ ಕೈಗೊಂಡರು.
ಮನೆಗಳ ಮುಂದೆ ರಂಗವಲ್ಲಿಯನ್ನು ಹಾಕಿ ವೇಷಧಾರಿಗಳನ್ನು ಸ್ವಾಗತಿಸಿದ ಗ್ರಾಮಸ್ಥರು ಅವರ ಪಾದಪೂಜೆ ಮಾಡಿ ಪಡಿ ನೀಡಿ ಆರತಿ ಎತ್ತಿ ಬೀಳ್ಕೊಟ್ಟರು.
ನಂತರ ದೇವಾಲಯದ ಶ್ರೀರಾಮನಾಮಲಿಪಿ ಮಂಟಪದಲ್ಲಿ ಹಾಸನದ ವಿದ್ವಾನ್ ಬಿಎನ್ಎಸ್ ಮುರಳಿ ಅವರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಸಂಗೀತಗಾರರು ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನಡೆಸಿ ಸಾಮೂಹಿಕವಾಗಿ ಸಂಗೀತ ಸೇವೆ ಸಲ್ಲಿಸಿದರು.
ಇದೇ ವೇಳೆ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ನೇತೃತ್ವದಲ್ಲಿ ಕಾಶ್ಮೀರದಲ್ಲಿ ನಡೆದ ಉಗ್ರಗಾಮಿ ಕೃತ್ಯದಲ್ಲಿ ಹುತಾತ್ಮರಾದ ಯೋಧರಿಗೆ ಗೀತ ನಮನ ಸಲ್ಲಿಸಲಾಯಿತು, ಯೋಧರ ಕ್ಷೇಮಕ್ಕಾಗಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು.
ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.ಮಹಾ ಮಂಗಳಾರತಿ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.
ಸಾಂಸ್ಕøತಿಕ ಸಂಘದ ಅಧ್ಯಕ್ಷ ಗಿರಿಧರ್ ಯತೀಶ್, ಉಪಾಧ್ಯಕ್ಷ ಆನಂದ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಉಜ್ವಲ್ ಡಿ.ಪಡುಬಿದ್ರಿ, ಪದಾಧಿಕಾರಿಗಳಾದ ವಿನೀತ್ ಕುಮಾರ್, ರಣಜಿತ್ ಸಿಂಗ್, ಗೋಪಾಲಕೃಷ್ಣ, ಸುರೇಂದ್ರಶೆಟ್ಟಿ, ಶ್ರೀದೇವಿ ಮೋಹನ್, ಮುಕುಂದ ಜೋಯ್ಸ್, ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ|| ಮಂಜುಳಾ ಹುಲ್ಲಹಳ್ಳಿ ಉತ್ಸವದಲ್ಲಿ ಪಾಲ್ಗೊಂಡಿದ್ದರು










