ತಿರುವನಂತಪುರಂ : ಪತ್ನಿಯನ್ನು ಇತರ ಮಹಿಳೆಯರಿಗೆ ಹೋಲಿಸುವುದು ಮತ್ತು ಆಕೆ ನಿರೀಕ್ಷೆಯ ಸಂಗಾತಿಯಲ್ಲ ಎಂದು ಅವಳನ್ನು ನಿರಂತರವಾಗಿ ನಿಂದಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮವಾಗಿದೆ. ಇದನ್ನು ಪತ್ನಿಯು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸುಮಾರು 13 ವರ್ಷಗಳ ಕಾಲದಿಂದ ಪತ್ನಿಯಿಂದ ಬೇರ್ಪಟ್ಟಿದ್ದ ಪತಿಯು ತಮ್ಮ ಮದುವೆಯನ್ನು ಅನೂರ್ಜಿತಗೊಳಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿ ಈ ತೀರ್ಪು ನೀಡಿದೆ.
ಕೌಟುಂಬಿಕ ನ್ಯಾಯಾಲಯವು ದಂಪತಿಯ ವಿವಾಹವನ್ನು ವಿವಾಹದ ಮೂಲ ಅಗತ್ಯಗಳನ್ನು ಪೂರೈಸದ ಕಾರಣದಿಂದ ಅನೂರ್ಜಿತಗೊಳಿಸಿತ್ತು. ಆದರೆ, ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಸಿ.ಎಸ್. ಸುಧಾ ಅವರ ಪೀಠವು, 1869ರ ವಿಚ್ಛೇದನ ಕಾಯಿದೆಯಡಿ ಪತಿಯಿಂದ ಪತ್ನಿಗಾದ ಮಾನಸಿಕ ಕ್ರೌರ್ಯದ ಕಾರಣದಿಂದ ವಿವಾಹವನ್ನು ಅನೂರ್ಜಿತಗೊಳಿಸಲಾಗಿದೆ ಎಂದು ಹೇಳುವ ಮೂಲಕ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಮಾರ್ಪಡಿಸಿತು.
ದಾಖಲೆಗಳ ಪ್ರಕಾರ ದಂಪತಿ ಕೇವಲ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಒಟ್ಟಿಗೆ ಇದ್ದಂತೆ ಕಂಡುಬರುತ್ತದೆ. ನಂತರ ಅವರು ಬೇರ್ಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಪತಿಯು ಪತ್ನಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ವಿಚಾರಣೆ ಸಂದರ್ಭದಲ್ಲಿ ತಿಳಿದುಬಂದಿದೆ. ಜೊತೆಗೆ ಪತ್ನಿಯು ದೈಹಿಕವಾಗಿ ಆಕರ್ಷಣೀಯವಾಗಿ ಇಲ್ಲ ಎಂಬ ಕಾರಣಕ್ಕೆ ಆಕೆಯೊಂದಿಗೆ ಪತಿ ಒಡನಾಟದಲ್ಲಿ ತೊಡಗಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಪೀಠ ಹೇಳಿದೆ.










