ಹೆಂಗಳೆಯರ ಸುಂದರ ಮುಖದಲ್ಲಿ ಬಯಸದೆ ಬರುವ ಅತಿಥಿ ಕಪ್ಪು ಕಲೆಗಳು. ಹೌದು ಸಹಜವಾಗಿ ಮಹಿಳೆಯರ ಮುಖದಲ್ಲಿ ಕಂಡುಬರುವ ಹಾನಿಕಾರಕವಲ್ಲದ ಕಪ್ಪು ಕಲೆಗಳು ಮುಖದ ಅಂದವನ್ನು ಕೆಡಿಸುತ್ತದೆ. ನಮ್ಮ ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾದಂತೆಲ್ಲಾ ಈ ಕಲೆಗಳು ಕೆನ್ನೆ, ಹಣೆ, ಮೂಗಿನ ಮೇಲೆ ಮೂಡಲಾರಂಭಿಸುತ್ತವೆ. ಈ ಹೈಪರ್ ಪಿಗ್‍ಮೆಂಟೇಶನ್ ಅಥವಾ ಬಂಗಿಗೆ ಕಾರಣಗಳು ಹಲವಾರು. ಸುಡುವ ಸೂರ್ಯನ ಬಿಸಿಗೆ ಸತತವಾಗಿ ಚರ್ಮವನ್ನು ಒಡ್ಡುವುದು, ವಂಶವಾಹಿಗಳು, ಹಾರ್ಮೋನಲ್ ಬದಲಾವಣೆಗಳು, ಅತಿಯಾದ ರಾಸಾಯನಿಕ ಪ್ರಸಾದನ ಬಳಕೆ ಬಂಗಿಗೆ ಕಾರವಾಗುತ್ತದೆ.
ಇಂದು ಬಂಗು ನಿವಾರಣೆಗೆ ಲೇಸರ್ ಚಿಕಿತ್ಸೆ, ಕೆಮಿಕಲ್ ಪೀಲಿಂಗ್ ನಂತಹ ದುಬಾರಿ ಚಿಕಿತ್ಸೆಗಳಿದ್ದರೂ ಕಡಿಮೆ ಖರ್ಚಿನಲ್ಲಿ ಮನೆಯಲ್ಲಿಯೇ ದೊರೆಯುವಂತಹ ಹಣ್ಣು ತರಕಾರಿಗಳಿಂದ ಪರಿಣಾಮಕಾರಿಯಾಗಿ ಈ ಕಪ್ಪು ಕಲೆಗಳನ್ನು ದೂರ ಮಾಡಿಕೊಳ್ಳಬಹುದು.
1) ಆಪಲ್ ಸೈಡರ್ ವಿನೇಗರ್ :
ಬೀಟಾ-ಕೆರೋಟಿನ್ ಅನ್ನು ಹೊಂದಿರುವ ಆಪಲ್ ಸೈಡರ್ ವಿನೆಗರ್ ಮುಖದ ಕಪ್ಪು ಕಲೆಗಳನ್ನು ನಿವಾರಿಸುತ್ತದೆ.
• ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಎರಡು ಚಮಚ ನೀರಿನೊಂದಿಗೆ ಬೆರೆಸಿ ಕಪ್ಪು ಕಲೆಗಳಿರುವ ಜಾಗಕ್ಕೆ ಈ ಮಿಶ್ರಣವನ್ನು ಹಚ್ಚಿ 5 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. ದಿನಕ್ಕೆ ಎರಡು ಬಾರಿಯಂತೆ ನಿರೀಕ್ಷಿಸಿದ ಫಲಿತಾಂಶ ದೊರೆಯುವವರೆಗೂ ಮಿಶ್ರಣವನ್ನು ಮುಖಕ್ಕೆ ಹಚ್ಚುತ್ತಾ ಬನ್ನಿ
2) ಕೆಂಪು ಈರುಳ್ಳಿ :
• ವಿಟಮಿನ್ ಸಿ ಎತೇಚ್ಛವಾಗಿರುವ ಆಂಟಿ ಆಕ್ಸಿಡೆಂಟ್‍ಗಳಲ್ಲಿ ಒಂದಾದ ಕೆಂಪು ಈರುಳ್ಳಿಯನ್ನು ಕತ್ತರಿಸಿ ಕಪ್ಪು ಕಲೆಗಳಿರುವ ಭಾಗಕ್ಕೆ ದಿನಕ್ಕೆರಡು ಬಾರಿಯಂತೆ ಹಚ್ಚುತ್ತಾ ಬಂದರೆ ಅದ್ಭುತವಾದ ಪ್ರಮಾಣದಲ್ಲಿ ಕಪ್ಪು ಕಲೆಗಳು ಮಾಯವಾಗಲಾರಂಭಿಸುತ್ತವೆ.
3) ಪಪ್ಪಾಯ :
• ಪಪ್ಪಾಯ ಹಣ್ಣಿನಲ್ಲಿರುವ ಪ್ಯಾಪೇನ್ ಅಂಶವು ಉತ್ತಮ ರೀತಿಯಲ್ಲಿ ಚರ್ಮವನ್ನು ರಿಜುವನೇಟ್ ಮಾಡುತ್ತದೆ.
• ತುರಿದ ಪಪ್ಪಾಯ ಹಣ್ಣಿನ ರಸವನ್ನು ನಿತ್ಯವೂ ಮುಖಕ್ಕೆ ಲೇಪಿಸಿ 10-15 ನಿಮಿಷಗಳ ನಂತರ ಮುಖವನ್ನು ತೊಳೆದರೆ ನುಣುಪಾದ ಕಲೆ ರಹಿತ ತ್ವಚೆ ಖಂಡಿತಾ ನಿಮ್ಮದಾಗುತ್ತದೆ.
4) ಬಾದಾಮಿ ಹಾಗೂ ಹಾಲಿನ ಮಿಶ್ರಣ :
ಚರ್ಮದ ಅತಿಯಾದ ಒಣಗುವಿಕೆ ಕೂಡಾ ಬಂಗಿಗೆ ಎಡೆಮಾಡಿಕೊಡುತ್ತದೆ. ಹೀಗಿರುವಾಗಿ ಫ್ಯಾಟಿ ಆಸಿಡ್‍ಗಳಿಂದ ಕೂಡಿದ ಬಾದಾಮಿ ಬೀಜಗಳನ್ನು ಹಾಲಿನಲ್ಲಿ ನೆನೆಸಿ ರುಬ್ಬಿ ಮುಖಕ್ಕೆ ಹಚ್ಚಿ 10-15 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯುತ್ತಾ ಬಂದರೆ ಚರ್ಮಕ್ಕೆ ಅಗತ್ಯವಾದ ನ್ಯೂಟ್ರಿಯೆಂಟ್‍ಗಳು ದೊರಕಿ ಚರ್ಮ ನುಣುಪಾಗಿ ಹೊಳೆಯತೊಡಗುತ್ತದೆ.
5) ವಿಟಮಿನ್-ಇ :
ಶುಷ್ಕಗೊಂಡ ಚರ್ಮಕ್ಕೆ ಮರು ಜೀವ ಕೊಡಲು ವಿಟಮಿನ್-ಇ ಬೇಕೇ ಬೇಕು. ಮಾರುಕಟ್ಟೆಯಲ್ಲಿ ದೊರಕುವ ವಿಟಮಿನ್-ಇ ಕ್ಯಾಪ್ಸೂಲ್‍ಗಳನ್ನು ಕಲೆಗಳ ನಿವಾರಣೆಗೆ ಬಳಸಬಹುದು. 2-3 ವಿಟಮಿನ್-ಇ ಕ್ಯಾಪ್ಸೂಲ್‍ಗಳನ್ನು ಒಡೆದು ಅದರಿಂದ ಬರುವ ಎಣ್ಣೆಯೊಂದಿಗೆ 2 ಹನಿ ಹರಳೆಣ್ಣೆಯನ್ನು ಮಿಶ್ರಣ ಮಾಡಿ ರಾತ್ರಿ ಮಲಗುವಾಗ ಮುಖಕ್ಕೆ ಲೇಪಿಸಿ ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯುತ್ತಾ ಬಂದರೆ ಮುಖದ ಮೇಲಿರುವ ಬಂಗಿನ ಕಲೆಗಳು ನಿವಾರಣೆಯಾಗುತ್ತದೆ.
ಹೀಗೆ ಚರ್ಮದ ಆರೈಕೆಗೆ ನಮ್ಮ ಕೈಗೆಟುಕುವಂತೆಯೇ ಹಲವಾರು ನೈಸರ್ಗಿಕ ಸಾಧನಗಳಿದ್ದರೂ, ದುಬಾರಿ ಬೆಲೆ ತೆತ್ತು ರಾಸಾಯನಿಕ ಪರಿಕರಗಳಿಂದ ಮತ್ತಷ್ಟು ನಮ್ಮ ಚರ್ಮಕ್ಕೆ ಹಾನಿಯುಂಟುಮಾಡಿಕೊಳ್ಳುವುದರ ಬದಲು ಆರೋಗ್ಯಯುತ ದಿನಚರಿಯೊಂದಿಗೆ ಮೇಲೆ ತಿಳಿಸಿರುವ ಪರಿಣಾಮಕಾರಿಯಾಗಿ ಚರ್ಮದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.










