ದೆಹಲಿ ಅಬಕಾರಿ ನೀತಿ ಹಗರಣ – ತೆಲಂಗಾಣ ಸಿಎಂ ಪುತ್ರಿಗೆ ಇಡಿಯಿಂದ ಮತ್ತೆ ಸಮನ್ಸ್…

48
firstsuddi

ನವದೆಹಲಿ : ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ್ ರಾವ್ ಅವರ ಪುತ್ರಿ, ಬಿಆರ್‍ಎಸ್ ಪಕ್ಷದ ನಾಯಕಿ ಕವಿತಾ ಅವರನ್ನು ಇಡಿ ನಿನ್ನೆ 10 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಇಂದು ಕೂಡ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.

ನಿನ್ನೆ ಬೆಳಗ್ಗೆ 10.30ಕ್ಕೆ ಕವಿತಾ ಅವರು ದೆಹಲಿ ಕಚೇರಿಗೆ ಆಗಮಿಸಿದ್ದು, ಈ ವೇಳೆ ವಿಚಾರಣೆ ಆರಂಭಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾತ್ರಿ 9.15ಕ್ಕೆ ಮುಕ್ತಾಯಗೊಳಿಸಿದರು. ವಿಚಾರಣೆ ಬಳಿಕ ಕಚೇರಿಯಿಂದ ಕವಿತಾ ಅವರು ವಿಜಯ ಚಿಹ್ನೆಯನ್ನು ತೋರಿಸುತ್ತಾ ಹೊರಬಂದು ಇಡಿ ಕಚೇರಿಯಿಂದ ನಿರ್ಗಮಿಸಿದರು. ಇದೀಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದು, ಇಂದೂ ಕೂಡ ಕವಿತಾ ಅವರು ವಿಚಾರಣೆಗೆ ಹಾಜರಾಗಬೇಕಿದೆ.

ಇದಕ್ಕೂ ಮೊದಲು ಮಾರ್ಚ್ 11ರಂದು ಸುಮಾರು 9 ಗಂಟೆಗಳ ಕಾಲ ಇವರನ್ನು ಇಡಿ ಮೊದಲ ಬಾರಿಗೆ ಪ್ರಶ್ನಿಸಿತ್ತು. ನಂತರ ಮಾರ್ಚ್ 16ರಂದು 2ನೇ ಬಾರಿಗೆ ವಿಚಾರಣೆ ನಡೆಸಲಾಗಿತ್ತು.

ಮದ್ಯ ನೀತಿ ಹಗರಣದಲ್ಲಿ ಕವಿತಾ ಅನೇಕ ಮೊಬೈಲ್ ಫೋನ್ ಕರೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಬೇನಾಮಿ ಆಸ್ತಿಯನ್ನೂ ಹೊಂದಿದ್ದಾರೆ ಎಂಬುದು ಇಡಿ ಅಧಿಕಾರಿಗಳ ಆರೋಪ. ಇದೇ ಪ್ರಕರಣ ಸಂಬಂಧ ಹೈದರಾಬಾದ್ ಮೂಲದ ಉದ್ಯಮಿ, ಕವಿತಾ ಅವರ ಆಪ್ತ ಅರುಣ್ ರಾಮಚಂದ್ರನ್ ಪಿಳ್ಳೈ ಎಂಬುವವರನ್ನು ಈಗಾಗಲೇ ಬಂಧಿಸಲಾಗಿದೆ.