ಲಕ್ನೋ: ಉತ್ತರ ಪ್ರದೇಶದ ಬಲ್ಲಿಯಾದಲ್ಲಿ 15 ವರ್ಷದ ಬಾಲಕಿಯನ್ನು ಅಪಹರಿಸಿ ಒಂದೂವರೆ ತಿಂಗಳ ಕಾಲ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಅಪ್ರಾಪ್ತ ಬಾಲಕಿ ಜುಲೈ 9 ರಂದು ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ತನ್ನ ಗ್ರಾಮದಿಂದ ನಾಪತ್ತೆಯಾಗಿದ್ದಾಳೆ. ಬಾಲಕಿ ನಾಪತ್ತೆಯಾದ ಮರುದಿನ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.
ಅಂತೆಯೇ ಬಾಲಕಿಯ ಹುಡುಕಾಟದಲ್ಲಿದ್ದ ಪೊಲೀಸರು ಆಗಸ್ಟ್ 26ರಂದು ಡಿಯೋರಿಯಾ ಎಂಬ ಪ್ರದೇಶದಿಂದ ಆಕೆಯನ್ನು ರಕ್ಷಣೆ ಮಾಡಿ ಬಳಿಕ ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆ ದಾಖಲಿಸಿದ್ದಾರೆ.
ಬಿಹಾರದ ಸಿವಾನ್ ಜಿಲ್ಲೆಯ ನಿವಾಸಿ ರಾಹುಲ್ ಕುಮಾರ್ ಸಿಂಗ್ (19) ತನ್ನನ್ನು ಅಪಹರಿಸಿ ನಂತರ ಡಿಯೋರಿಯಾಕ್ಕೆ ಕರೆದೊಯ್ದಿದ್ದಾನೆ. ನಂತರ ಅಲ್ಲಿ ಸೆರೆಯಾಗಿರಿಸಿಕೊಂಡು ಸುಮಾರು ಒಂದೂವರೆ ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ಆರೋಪಿಸಿರುವುದಾಗಿ ಎಸ್ಎಚ್ಒ ರಾಜೀವ್ ಸಿಂಗ್ ತಿಳಿಸಿದ್ದಾರೆ.
ನಿನ್ನೆ ಠಾಣೆ ಕ್ರಾಸಿಂಗ್ ಬಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಎಚ್ಒ ತಿಳಿಸಿದರು.










