ಅಗರ್ತಲಾ : ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ 16 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ.
ಅಕ್ಟೋಬರ್ 19ರಂದು ಕುಮಾರಘಾಟ್ ನ 3 ಅಂತಸ್ತಿನ ಕಟ್ಟಡದಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ನೆರೆಯ ಮಹಿಳೆಯೊಬ್ಬಳೇ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗುವಂತೆ ಮಾಡಿದ್ದಾಳೆ. ಈ ಸಂಬಂಧ ಸಂತ್ರಸ್ತೆ ತಾಯಿ ನೀಡಿದ ದೂರಿನ ಮೇರೆಗೆ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇನ್ನೂ ಹಲವರಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಸಿಪಿಐ(ಎಂ) ಸಚಿವರ ಪುತ್ರನ ಕೈವಾಡವಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಪ್ರಕರಣದಲ್ಲಿ ಸಚಿವರೊಬ್ಬರ ಪುತ್ರನ ಹೆಸರು ಕೇಳಿಬಂದಿದೆ. ಆದ್ದರಿಂದ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಬಂಧಿಸುವ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುತ್ತದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಆಶಿಶ್ ಸಹಾ ತಿಳಿಸಿದ್ದಾರೆ.
ಆದರೆ, ಬಿಜೆಪಿ ಈ ಆರೋಪವನ್ನು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದೆ. ಅಕ್ಟೋಬರ್ 19 ರಂದು ಕುಮಾರ್‌ಘಾಟ್‌ನಲ್ಲಿ ಘಟನೆ ನಡೆದಾಗ ಸಚಿವರ ಪುತ್ರ ಊರಿನಲ್ಲಿ ಇರಲಿಲ್ಲ ಹಾಗಾಗಿ ಈ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ರಾಜಕೀಯ ಪ್ರೇರಿತವಾಗಿದೆ. ನಾವು ಕೂಡ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಿಬೇಕು ಎಂದು ನಾವು ಒತ್ತಾಯ ಮಾಡುತ್ತೇವೆ ಎಂದು ಬಿಜೆಪಿಯ ಉನಕೋಟಿ ಜಿಲ್ಲಾಧ್ಯಕ್ಷ ಪಬಿತ್ರಾ ಚಂದ್ರ ದೇಬನಾಥ್ ಹೇಳಿದ್ದಾರೆ.










