ನವದೆಹಲಿ : 17 ವರ್ಷದ ಬಾಲಕಿಯ ಮೇಲೆ ದುಷ್ಕರ್ಮಿಗಳು ಆ್ಯಸಿಡ್ ದಾಳಿ ನಡೆಸಿರುವ ಘಟನೆ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನಡೆದಿದೆ.
ಬಾಲಕಿಯು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಇಬ್ಬರು ಕಿರಾತಕರು ಬೈಕ್ ನಲ್ಲಿ ಬಂದಿದ್ದಾರೆ. ಈ ವೇಳೆ ಹಿಂದೆ ಕುಳಿತಿದ್ದ ಕಿರಾತಕ ಬಾಲಕಿಯ ಮುಖದ ಮೇಲೆ ಆ್ಯಸಿಡ್ ಎರಚಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತೀವ್ರ ಗಾಯಗೊಂಡ ಆ್ಯಸಿಡ್ ಸಂತ್ರಸ್ತೆಯನ್ನು ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ವರದಿ ಪ್ರಕಾರ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಬಾಲಕಿಯ ಕುಟುಂಬ ನೀಡಿದ ದೂರಿನನ್ವಯ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಇನ್ನೊಬ್ಬನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮಗಳ ಎರಡೂ ಕಣ್ಣಿಗೂ ಆ್ಯಸಿಡ್ ಹೊಕ್ಕಿದೆ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ. ನಮ್ಮ ಸಣ್ಣ ಮಗಳು ಮನೆಗೆ ಓಡುತ್ತಾ ಬಂದು ಅಕ್ಕನಿಗೆ ಆ್ಯಸಿಡ್ ಎರಚಲಾಗಿದೆ ಎಂದು ಹೇಳಿದ್ದಳು. ಆ್ಯಸಿಡ್ ಎರಚಿದ ಹುಡುಗರು ಮುಖ ಮುಚ್ಚಿದ್ದರು, ಅವರನ್ನು ಪತ್ತೆ ಹಚ್ಚಬೇಕಿದೆ ಎಂದು ಅವರು ಹೇಳಿದ್ದಾರೆ.










