ಮುಂಬೈ: 17 ವರ್ಷದ ಬಾಲಕಿ ಮೇಲೆ ಆಕೆಯ ಸ್ವಂತ ತಂದೆ, ಚಿಕ್ಕಪ್ಪ ಮತ್ತು ಅಜ್ಜನೇ ಹಲವಾರು ಬಾರಿ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಬಾಲಕಿ ತನ್ನ ಕಾಲೇಜಿನಲ್ಲಿ ವಿಶಾಖ ಸಮಿತಿಯ ಸದಸ್ಯರಿಗೆ ತನಗಾದ ಕಷ್ಟವನ್ನು ವಿವರಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ಪುಣೆಯ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಇದೀಗ ಸಂತ್ರಸ್ತೆಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪುಣೆ ನಗರ ಪೊಲೀಸರು ಬಾಲಕಿಯ ತಂದೆ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಏನಿದು ಘಟನೆ?: ಬಾಲಕಿ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, 2016 ಮತ್ತು 2018ರ ನಡುವೆ ಕಾಲೇಜಿಗೆ ರಜೆ ಇದ್ದಾಗ ಉತ್ತರ ಪ್ರದೇಶದಲ್ಲಿದ್ದ ತನ್ನ ಮನೆಗೆ ಹೋದಾಗಲೆಲ್ಲ ಆ ಬಾಲಕಿಯ ಮೇಲೆ ಆಕೆಯ ತಂದೆ ಮತ್ತು ಚಿಕ್ಕಪ್ಪ ಪದೇ ಪದೇ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೆ, ಆ ಬಾಲಕಿ ತನ್ನ ಅಜ್ಜ ಕೂಡ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾಳೆ.
2018ರಲ್ಲಿ ಬಾಲಕಿ ತನ್ನ ತಂದೆಗೆ ತನ್ನ ಅಜ್ಜ ನೀಡುತ್ತಿರುವ ಕಿರುಕುಳದ ಬಗ್ಗೆ ಪತ್ರ ಬರೆದು ತಿಳಿಸಿದ್ದಳು. ಆದರೆ, ಆತ ಈ ಬಗ್ಗೆ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಅದರ ಬದಲು ಅದಾದ ನಂತರ ಆಕೆ ಮನೆಗೆ ಹೋದಾಗಲೆಲ್ಲ ಆಕೆಯ ಅಪ್ಪನೇ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೀಗ ನಾವು ಬಾಲಕಿಯ ತಂದೆ, ಅಜ್ಜ ಮತ್ತು ಚಿಕ್ಕಪ್ಪನ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಮತ್ತು ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.










