2 ತಿಂಗಳೂ ಕಳೆದರೂ ಸೈಕಲ್ ರಿಪೇರಿ ಮಾಡಿಲ್ಲ ಎಂದು ಪೊಲೀಸರಿಗೆ ಪತ್ರ ಬರೆದ ಬಾಲಕರು…

444
firstsuddi

ತಿರುವನಂತಪುರಂ : ಸೈಕಲ್ ರಿಪೇರಿ ಮಾಡಲು ಕೊಟ್ಟು 2 ತಿಂಗಳೂ ಕಳೆದರೂ ಸೈಕಲ್ ಶಾಪ್ ಮಾಲೀಕರು ಸೈಕಲನ್ನು ರಿಪೇರಿ ಮಾಡುತ್ತಿಲ್ಲ ಎಂದು 5ನೇ ತರಗತಿ ವಿದ್ಯಾರ್ಥಿಯೊಬ್ಬ ಪೊಲೀಸರಿಗೆ ಪತ್ರ ಬರೆದಿರುವ ಘಟನೆ ಕೇರಳದ ಕೋಜಿಕೋಡ್‍ನಲ್ಲಿ ನಡೆದಿದೆ. ಅಬಿನ್ ಎಂಬ ಬಾಲಕ ತನ್ನ ನೋಟ್ ಪುಸ್ತಕದಿಂದ ಹಾಳೆಯನ್ನು ಹರಿದು ಅದರಲ್ಲಿ “ತನ್ನ ಹಾಗೂ ಸಹೋದರನ ಸೈಕಲ್‍ನ್ನು ರಿಪೇರಿ ಮಾಡಲು ಕೊಟ್ಟಿದ್ದೆವು. ನಾವು ಅನೇಕ ಬಾರಿ ಶಾಪ್ ಬಳಿ ಹೋಗಿ ಕೇಳಿದರೆ ಇನ್ನೂ ನಮ್ಮ ಸೈಕಲ್ ರಿಪೇರಿ ಮಾಡಿಲ್ಲ ಎನ್ನುತ್ತಿದ್ದಾರೆ. ಈ ವಿಚಾರವಾಗಿ ನಮ್ಮ ಮನೆಯವರು ನಮಗೆ ಸಹಾಯ ಮಾಡುತ್ತಿಲ್ಲ. ಹೀಗಾಗಿ ಸೈಕಲ್‍ನ್ನು ಆದಷ್ಟು ಬೇಗ ರಿಪೇರಿ ಮಾಡಿಕೊಡಲು ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಪತ್ರವನ್ನು ಬರೆದಿದ್ದಾರೆ.

ಬಾಲಕ ಬರೆದಿರುವ ಪತ್ರವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಪೊಲೀಸರು, ನಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ನಮ್ಮ ಅಧಿಕಾರಿ ರಾಧಿಕಾ ಎನ್.ಪಿ ಅವರು ಸೈಕಲ್ ಶಾಪ್‍ಗೆ ಹೋಗಿ ವಿಚಾರಣೆ ಮಾಡಿದ್ದಾರೆ. ಮಾಲೀಕರು ಅನಾರೋಗ್ಯವಿದ್ದ ಕಾರಣ ರಿಪೇರಿ ಮಾಡಲು ಸಾಧ್ಯವಾಗಲಿಲ್ಲ. ಆದಷ್ಟು ಬೇಗ ರಿಪೇರಿ ಮಾಡಿಕೊಡುವುದಾಗಿ ತಿಳಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದಾದ ಬಳಿಕ ಮತ್ತೊಂದು ಪೋಸ್ಟ್ ಮಾಡಿರುವ ಕೇರಳ ಪೊಲೀಸರು ಇಬ್ಬರು ಸಹೋದರರ ಸೈಕಲ್ ವಾಪಾಸ್ ಬಂದಿದೆ ಎಂದು ಬರೆದು ಇಬ್ಬರು ಮಕ್ಕಳು ಸೈಕಲ್ ಬಳಿ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದು, ಪೊಲೀಸರ ಈ ಸಹಾಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.