ಮೈಸೂರು : ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿಯೊಬ್ಬಳು ಎರಡು ವರ್ಷದ ಕಂದಮ್ಮನನ್ನು ನೀರು ತುಂಬಿದ ಬಕೆಟ್ ನಲ್ಲಿ ಮುಳುಗಿಸಿ ಕೊಂದು ಬಳಿಕ ತಾನೂ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕು ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ.
ಅನ್ನಪೂರ್ಣ (22) ಮೃತ ಮಹಿಳೆ ಹಾಗೂ ಮೋಕ್ಷಿತ್ (2) ಸಾವನ್ನಪ್ಪಿದ ಮಗು. ಚಾಮರಾಜನಗರ ಜಿಲ್ಲೆಯ ಉಮ್ಮತ್ತೂರು ಗ್ರಾಮದ ಅನ್ನಪೂರ್ಣ ಎರಡು ವರ್ಷಗಳ ಹಿಂದೆ ಗಟ್ಟವಾಡಿ ಗ್ರಾಮದ ಮಹಾದೇವ ಪ್ರಸಾದ್ ಅಲಿಯಾಸ್ ರಚ್ಚು ಎಂಬವರನ್ನು ಮದುವೆಯಾಗಿದ್ದು, ಇಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಆಗಾಗ ಗಲಾಟೆ ಆಗುತ್ತಿತ್ತು. ಇದರಿಂದ ಬೇಸತ್ತ ಮಹಿಳೆ, ಮೊದಲಿಗೆ ಮಗುವನ್ನು ಬಕೆಟ್ ನಲ್ಲಿರುವ ನೀರಿಗೆ ಮುಳುಗಿಸಿದ್ದಾರೆ. ನಂತರ ಕೋಣೆಯಲ್ಲಿರುವ ಫ್ಯಾನ್ಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ನಂಜನಗೂಡು ಠಾಣಾ ಡಿವೈಎಸ್ಪಿ ಗೋವಿಂದ ರಾಜು, ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ ದೊಡ್ಡಕವಲಂದೆ, ಪಿಎಸ್ಐ ಮಹೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










