20 ರಿಂದ 40 ವರ್ಷದೊಳಗಿನ ಮಹಿಳಾ ಅಧಿಕಾರಿಗಳಿದ್ದರೆ ನಮ್ಮವರೇ ನಮಗೆ ವಿಲನ್ : ಸಾ.ರಾ.ಮಹೇಶ್.

105
firstsuddi

ಬೆಂಗಳೂರು : 20 ವರ್ಷದಿಂದ 40 ವರ್ಷದೊಳಗಿನ ಮಹಿಳಾ ಅಧಿಕಾರಿಗಳು ಇದ್ದರೆ ನಮ್ಮವರೇ ನಮಗೆ ವಿಲನ್ ಆಗುತ್ತಾರೆ. ಮಹಿಳಾ ಅಧಿಕಾರಿಗಳು ಅನ್ನೋದೆ ಕೆಲವರಿಗೆ ಅಡ್ವಾಂಟೇಜ್ ಆಗಿದೆ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ವಿಧಾನಸಭೆ ಕಲಾಪದಲ್ಲಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಪಿಡಿ ಖಾತೆಗಳ ಬಗ್ಗೆ ಎಚ್.ಡಿ ಕುಮಾರಸ್ವಾಮಿ ಪ್ರಸ್ತಾಪ ಮಾಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಾ.ರಾ.ಮಹೇಶ್ ರೋಹಿಣಿ ಸಿಂಧೂರಿ ವಿರುದ್ಧ ಆರೋಪ ಮಾಡಲು ಪ್ರಾರಂಭಿಸಿದರು. ಕೋವಿಡ್ ಕಾಲದಲ್ಲಿ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಸಾಕಷ್ಟು ಸಹಕಾರ ಕೊಟ್ಟಿದ್ದಾರೆ. ಆದರೆ ಕೆಲವು ಅಧಿಕಾರಿಗಳು ಮಾತ್ರ ಭ್ರಷ್ಟರಾಗಿ ಬದುಕುತ್ತಿದ್ದಾರೆ. ಕೇವಲ ಒಂದು ಬ್ಯಾಗ್ ವಿಚಾರದಲ್ಲಿ ಆರೂವರೆ ಕೋಟಿ ರೂಪಾಯಿ ನುಂಗಿದ್ದಾರೆ. ಎಂದು ಜೇಬಿನಲ್ಲಿ ಬ್ಯಾಗ್ ಇಟ್ಟುಕೊಂಡು ಬಂದಿದ್ದ ಜೆಡಿಎಸ್ ಶಾಸಕ ಸಾ.ರಾ ಮಹೇಶ್, ಸದನದಲ್ಲಿ ಬ್ಯಾಗ್ ಪ್ರದರ್ಶನ ಮಾಡಿ ರೋಹಿಣಿ ಸಿಂಧೂರಿ ವಿರುದ್ಧ ಕಿಡಿ ಕಾರಿದ್ದಾರೆ.

ನಾವೇನಾದರೂ ಲೂಟಿ ಮಾಡಿದ್ದರೆ ಜನರಿಗಾದರೂ ಕೊಡುತ್ತೇವೆ. ಅಧಿಕಾರಿಗಳು ಲೂಟಿ ಮಾಡಿದರೆ ಯಾರಿಗೆ ಕೊಡುತ್ತಾರೆ?. ಇಂಜಿನಿಯರ್, ಸಣ್ಣಪುಟ್ಟ ಅಧಿಕಾರಿಗಳ ಮೇಲೆ ಮಾತ್ರ ಐಟಿ, ಎಸಿಬಿ ದಾಳಿ ಆಗುತ್ತದೆ. ಆದರೆ, ಐಎಎಸ್, ಐಪಿಎಸ್ ಮನೆಗಳ ಮೇಲೆ ಐಟಿ ರೇಡ್ ಆಗುತ್ತಾ? ಸರ್ಕಾರಕ್ಕೆ ಕ್ರಮ ತಗೆದುಕೊಳ್ಳುವ ತಾಕತ್ತು ಇದೆಯೇ? ಎಂದು ಸದನದಲ್ಲಿ ಭಾವೋದ್ವೇಗದಿಂದ ಅವರು ಮಾತನಾಡಿದರು.

ಈ ವೇಳೆ ಸಾ.ರಾ.ಮಹೇಶ್ ಬೆಂಬಲಕ್ಕೆ ನಿಂತ ಹೆಚ್.ಡಿ.ಕುಮಾರಸ್ವಾಮಿ, ಒಬ್ಬ ಸರ್ಕಾರಿ ಅಧಿಕಾರಿ ಶಾಸಕರ ಮೇಲೆ ಮಾಧ್ಯಮಗಳ ಎದುರು ಹೋಗಿದ್ದು ಯಾಕೆ? ಇವರಿಗೆ ಅಧಿಕಾರ ಯಾರು ಕೊಟ್ರು? ಸರ್ಕಾರದ ಮುಖ್ಯ ಕಾರ್ಯದರ್ಶಿಯೇ ಮೈಸೂರಿಗೆ ತೆರಳಿ ಅಲ್ಲಿ ಗಲಾಟೆ ಮಾಡಿಕೊಂಡ ಇಬ್ಬರು ಐಎಎಸ್ ಅಧಿಕಾರಿಗಳ ಜೊತೆ ಮಾತನಾಡುತ್ತಾರೆ. ಇದು ಯಾವ ರೀತಿಯ ಆಡಳಿತ?. ಇದು ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರು, ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳೆದುರು ಹೋಗಿ ಮಾತಾಡುವಂತಿಲ್ಲ. ಕೆಲವು ಅಧಿಕಾರಿಗಳು ಓವರ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸಿಎಸ್ ಗೆ ನಾವು ಸೂಚಿಸುತ್ತೇವೆ ಎಂದು ತಿಳಿಸಿದರು.