2023-24ನೇ ಹಣಕಾಸು ವರ್ಷದಲ್ಲಿ ಕರ್ನಾಟಕದ ಜಿಎಸ್‍ಡಿಪಿ ಶೇ.10.2ರಷ್ಟು ಪ್ರಗತಿ ದಾಖಲಿಸಿದೆ.

24

ಬೆಂಗಳೂರು: ನ್ಯಾಷನಲ್ ಸ್ಟಾಟಿಸ್ಟಿಕಲ್ ಎಸ್ಟಿಮೇಟ್ ಆರಂಭದಲ್ಲಿ ಶೇ. 4ರಷ್ಟು ಕರ್ನಾಟಕದ ಜಿಎಸ್‍ಡಿಪಿ ಅಭಿವೃದ್ಧಿ ದರವನ್ನು ಅಂದಾಜಿಸಿತ್ತು. ಆದರೆ ಹಣಕಾಸು ವರ್ಷದ ಅಂತ್ಯಕ್ಕೆ ರಾಜ್ಯದ ಅಭಿವೃದ್ದಿ ದರ ಶೇ.13.1 ರಷ್ಟಾಗಿದ್ದು, ಎನ್‍ಎಸ್‍ಸಿ ಕರ್ನಾಟಕದ ಪ್ರಗತಿಯನ್ನು ತಪ್ಪಾಗಿ ಅಂದಾಜಿಸಿರುವುದು ಸ್ಪಷ್ಟವಾಗಿದೆ ಎಂದು ಸರ್ಕಾರ ತಿಳಿಸಿದೆ. 2023-24ನೇ ಹಣಕಾಸು ವರ್ಷದಲ್ಲಿ ಕರ್ನಾಟಕದ ಜಿಎಸ್‍ಡಿಪಿ ಶೇ.10.2 ರಷ್ಟು ಪ್ರಗತಿ ದಾಖಲಿಸಿದೆ ಎಂದು ರಾಜ್ಯ ಸರ್ಕಾರ ಇಂದು ತಿಳಿಸಿದೆ.
ಕಳೆದ ವರ್ಷ ರಾಜ್ಯ ತೀವ್ರ ಬರಗಾಲಕ್ಕೆ ತುತ್ತಾಗಿದ್ದರೂ, ಜಾಗತಿಕವಾಗಿ ಐಟಿ ಮಾರುಕಟ್ಟೆ ಹಿನ್ನಡೆ ಅನುಭವಿಸಿದ್ದರೂ, ಕರ್ನಾಟಕ ಉತ್ತಮ ಆರ್ಥಿಕ ಪ್ರಗತಿ ಸಾಧಿಸಿದೆ. ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯಿಂದಾಗಿ ಕೃಷಿ ವಲಯದ ಅಭಿವೃದ್ದಿ ಉದ್ದೇಶಿತ ಪ್ರಮಾಣದಲ್ಲಿ ಸಾಧ್ಯವಾಗಿರುವುದಿಲ್ಲ. ಕರ್ನಾಟಕದ ಒಟ್ಟು ಆರ್ಥಿಕತೆಯಲ್ಲಿ ಐಟಿ ಮತ್ತು ಹಾರ್ಡ್‍ವೇರ್ ವಲಯದ ಪಾಲು ಶೇ.28ರಷ್ಟಿದ್ದು, ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಈ ವಲಯ ಜಾಗತಿಕವಾಗಿ ಹಿನ್ನಡೆ ಅನುಭವಿಸಿದೆ.
2024-25ನೇ ಹಣಕಾಸು ಸಾಲಿಗೆ ಎನ್‍ಎಸ್ಸಿ ಕರ್ನಾಟಕ ರಾಜ್ಯಕ್ಕೆ ಶೇ.9.4 ಜಿಎಸ್‍ಡಿಪಿ ಪ್ರಗತಿಯನ್ನು ಅಂದಾಜಿಸಿದ್ದು, ಇದು ರಾಷ್ಟ್ರೀಯ ಸರಾಸರಿ ಶೇ.10.5ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಆದರೆ ಹಣಕಾಸು ಸಚಿವಾಲಯ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಗಮನದಲ್ಲಿರಿಸಿ ಈ ಅವಧಿಯಲ್ಲಿ ಕರ್ನಾಟಕದ ಜಿಎಸ್‍ಡಿಪಿ ದರವನ್ನು ಶೇ.14ರಷ್ಟು ಅಂದಾಜಿಸಿದೆ. 2024ರ ಸೆಪ್ಟಂಬರ್ ಅವಧಿಯಲ್ಲಿ ಕರ್ನಾಟಕ ವರ್ಷದಿಂದ ವರ್ಷಕ್ಕೆ ಜಿಎಸ್‍ಟಿ ಸಂಗ್ರಹದಲ್ಲಿ ಶೇ.10ರಷ್ಟು ಹಾಗೂ ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಶೇ.24ರಷ್ಟು ಹೆಚ್ಚಳ ದಾಖಲಿಸಿದ್ದು, ಉತ್ತಮ ಆರ್ಥಿಕತೆಯನ್ನು ತೋರಿಸುತ್ತಿದೆ ಎಂದು ಸರ್ಕಾರ ಹೇಳಿದೆ. ಕರ್ನಾಟಕದ ತಲಾ ಜಿಎಸ್‍ಡಿಪಿ ದೇಶದಲ್ಲೇ ಅತ್ಯಧಿಕವಾಗಿದೆ. ಗ್ಯಾರಂಟಿ ಸೇರಿದಂತೆ ರಾಜ್ಯ ಸರ್ಕಾರದ ಹಲವು ಜನಪರ ಯೋಜನೆಗಳು ಅಭಿವೃದ್ಧಿಯ ಫಲ ಎಲ್ಲಾ ವರ್ಗಗಳಿಗೂ ತಲುಪುವುದನ್ನು ಖಾತ್ರಿಪಡಿಸಿವೆ. ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿಯನ್ನು ಒಂದುಗೂಡಿಸುವ ಕರ್ನಾಟಕದ ಆರ್ಥಿಕ ಮಾದರಿಯ ಯಶಸ್ಸನ್ನು ಇದು ತೋರಿಸುತ್ತದೆ. ಐಟಿ ವಲಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಸಾಮಥ್ರ್ಯವನ್ನು ಹೊಂದಿರುವುದು ದೇಶದ ಡಿಜಿಟಲ್ ಮತ್ತು ಆರ್ಥಿಕ ರಂಗದಲ್ಲಿ ಪ್ರಮುಖ ಪಾತ್ರ ವಹಿಸಲು ಕಾರಣವಾಗಿದೆ ಎಂದು ಸರ್ಕಾರ ತಿಳಿಸಿದೆ.