3 ಸಾವಿರ ಸಿನಿ ಕಾರ್ಮಿಕರಿಗೆ ತಲಾ 5 ಸಾವಿರ ನೆರವು ಘೋಷಿಸಿದ ಯಶ್!

82
firstsuddi

ಬೆಂಗಳೂರು : ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ಬಡ ಕಲಾವಿದರು ಹಾಗೂ ಕಾರ್ಮಿಕರಿಗೆ ಯಶ್ ಸಹಾಯ ಮಾಡಲು ಮುಂದಾಗಿದ್ದಾರೆ. 3 ಸಾವಿರಕ್ಕೂ ಹೆಚ್ಚು ಸಿನಿಮಾ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ರೂ. ಗಳನ್ನು ತಮ್ಮ ಸಂಪಾದನೆಯಿಂದ ನೀಡುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಯಶ್ ಅವರು, ಕಾಣದ ವೈರಸ್ನಿಂದ ಕಳೆದೊಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈ ಕಟ್ಟಿ ಕುಳಿತಿದೆ. ಹೌದು ಇದು ಬರೀ ಮಾತನಾಡುವ ಸಮಯವಲ್ಲ. ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ. ಹಾಗಾಗಿ ಚಿತ್ರರಂಗದ 21 ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 3,000ಕ್ಕೂ ಹೆಚ್ಚಿರುವ ನಮ್ಮ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ಹಣವನ್ನ ತನ್ನ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದೇನೆ. ಈ ಬಗ್ಗೆ ಈಗಾಗಲೇ ನಮ್ಮ ಒಕ್ಕೂಟದ ಅಧ್ಯಕ್ಷರಾದ ಸಾ.ರಾ.ಗೋವಿಂದ್‌ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರನಾಥ್‌ ಅವರೊಂದಿಗೆ ಚರ್ಚಿಸಿದ್ದೇನೆ. ನಮ್ಮ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರ ಅಧಿಕೃತ ಬ್ಯಾಂಕ್‌ ವಿವರ ತಲುಪಿದ ತಕ್ಷಣವೇ ಇದು ಕಾರ್ಯರೂಪಕ್ಕೆ ಬರಲಿದೆ.

ಈ ಸಣ್ಣ ಸಹಾಯ ಈಗ ಎದುರಾಗಿರುವ ಎಲ್ಲ ಕಷ್ಟಗಳಿಗೂ ಪರಿಹಾರ ಎಂಬುವುದು ನನ್ನ ಭಾವನೆಯಲ್ಲ. ಬದಲಿಗೆ ಶಕ್ತಿ ಇರುವ ಹೃದಯವಂತರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿರುವ ಜನಸಮುದಾಯದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಸಹಾಯ ಮಾಡಿದರೆ, ನಾನು ಮಾಡಿದ ಪ್ರಯತ್ನಕ್ಕೂ ಸಾರ್ಥಕತೆ ಬರುತ್ತದೆ ಎನ್ನುವುದು ನನ್ನ ಆಶಯ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.