ಹೈದರಾಬಾದ್: 4 ವರ್ಷದ ಬಾಲಕಿಯ ಮೇಲೆ ಆಕೆ ಓದುತ್ತಿದ್ದ ಶಾಲೆಯ ವಾಹನ ಚಾಲಕ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಹೈದರಾಬಾದ್ ನ ಬಂಜಾರ ಹಿಲ್ಸ್ ಪ್ರದೇಶದಲ್ಲಿ ನಡೆದಿದೆ.
ಬಂಜಾರ ಹಿಲ್ಸ್‍ನ ಶಾಲೆಯೊಂದರಲ್ಲಿ ಎಲ್ ಕೆಜಿ ಓದುತ್ತಿರುವ 4 ವರ್ಷದ ಬಾಲಕಿಗೆ ಆ ಶಾಲೆಯ ಪ್ರಾಂಶುಪಾಲರ ವಾಹನದ ಚಾಲಕ ಕಳೆದ 2 ತಿಂಗಳಿನಿಂದ ಲೈಂಗಿಕ ಕಿರುಕುಳ ನೀಡಿದ್ದಾನೆ. ಆರೋಪಿ ರಜಿನಿಕುಮಾರ್(36) 10 ವರ್ಷಗಳಿಂದ ಶಾಲೆಯ ಪ್ರಾಂಶುಪಾಲರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ.
ಬಾಲಕಿಯ ಪೋಷಕರು ತಮ್ಮ ಮಗಳ ವರ್ತನೆಯಲ್ಲಿ ಬದಲಾವಣೆಯಾಗಿದ್ದನ್ನು ಕಂಡು ಅನುಮಾನ ಪಟ್ಟಿದ್ದರು. ಅಲ್ಲದೆ, ಸದಾ ಆಟವಾಡಿಕೊಂಡು ಇರುತ್ತಿದ್ದ ಆ ಬಾಲಕಿ ಇತ್ತೀಚೆಗೆ ಬಹಳ ಖಿನ್ನತೆಗೆ ಒಳಗಾಗಿದ್ದಳು. ಈ ಬಗ್ಗೆ ಅವರು ತಮ್ಮ ಮಗಳನ್ನು ವಿಚಾರಿಸಿದಾಗ ಆಕೆ ಆ ಚಾಲಕನ ಬಗ್ಗೆ ಹೇಳಿದ್ದಾಳೆ.
ಇದರಿಂದ ಆಕ್ರೋಶಗೊಂಡ ಬಾಲಕಿಯ ಕುಟುಂಬಸ್ಥರು ಹಾಗೂ ಸ್ನೇಹಿತರು ಶಾಲೆಗೆ ತೆರಳಿ ಚಾಲಕನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಬಂಜಾರ ಹಿಲ್ಸ್ ಪೊಲೀಸರು ಆರೋಪಿ ಚಾಲಕನನ್ನು ಬಂಧಿಸಿದ್ದಾರೆ. ಮಗುವನ್ನು ಸಹಾಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.










