6ನೇ ತರಗತಿಯೊಳಗಿನ ಹೆಣ್ಣುಮಕ್ಕಳ ಶಿಕ್ಷಣಕ್ಕೆ ತಾಲಿಬಾನ್ ಅಸ್ತು…

44
firstsuddi

ಕಾಬೂಲ್ : 1 ರಿಂದ 6ನೇ ತರಗತಿವರೆಗಿನ ಅಥವಾ ಅದಕ್ಕಿಂತಲೂ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಶಾಲೆಗಳಲ್ಲಿ ತಮ್ಮ ಅಧ್ಯಯನ ಮುಂದುವರಿಸಲು ತಾಲಿಬಾನ್ ಅವಕಾಶ ನೀಡಿದೆ.

ತಾಲಿಬಾನ್ ನ ಶಿಕ್ಷಣ ಸಚಿವಾಲಯವು ಆರನೇ ತರಗತಿಗಿಂತ ಕೆಳಗಿನ ಬಾಲಕಿಯರಿಗಾಗಿ ಶಾಲೆಗಳು ಮತ್ತು ಶೈಕ್ಷಣಿಕ ಕೇಂದ್ರಗಳನ್ನು ತೆರೆಯುವಂತೆ ಅಧಿಕಾರಿಗಳಿಗೆ ಪತ್ರವೊಂದನ್ನು ನೀಡಿದೆ.

ಕೆಲ ದಿನಗಳ ಹಿಂದೆ ತಾಲಿಬಾನ್ ಮಹಿಳಾ ಶಿಕ್ಷಣಕ್ಕೆ ಸಂಪೂರ್ಣ ನಿಷೇಧ ಹೇರಿತ್ತು. ಇದನ್ನು ವಿರೋಧಿಸಿ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ಬೆನ್ನಲ್ಲೇ ಪದವಿ ಕಾಲೇಜಿನ ಪುರುಷ ವಿದ್ಯಾರ್ಥಿಗಳು ತರಗತಿಗಳನ್ನ ಬಹಿಷ್ಕರಿಸಿದ್ದರು. ಮಹಿಳಾ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವವರೆಗೂ ತಾವೂ ಕಾಲೇಜು ಪ್ರವೇಶ ಮಾಡುವುದಿಲ್ಲವೆಂದು ಎಂದು ಪ್ರತಿಭಟನೆಗೆ ಮುಂದಾಗಿದ್ದರು. 

ಮಾನವಹಕ್ಕುಗಳ ಆಯೋಗ, ತಾಲಿಬಾನ್ ಶಿಕ್ಷಣ ಕ್ರಮವನ್ನು ನಾಚಿಕೆಗೇಡಿನ ನಿರ್ಧಾರ ಎಂದು ಖಂಡಿಸಿತ್ತು. ಈ ಬೆನ್ನಲ್ಲೇ ತಾಲಿಬಾನ್ ಶಿಕ್ಷಣ ನೀತಿ ಮಾನವೀಯತೆಗೆ ವಿರೋಧ, ಮಹಿಳಾ ಶಿಕ್ಷಣದ ನೀತಿಗಳಲ್ಲಿ ಬದಲಾವಣೆಯ ಅಗತ್ಯವಿದೆ ವಿದೇಶಿ ಸರ್ಕಾರಗಳು ಹೇಳಿದ್ದವು.

G7 ಗುಂಪಿನ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್ ವಿದೇಶಾಂಗ ಸಚಿವರು ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ತಾಲಿಬಾನ್ ಗೆ ಒತ್ತಾಯಿಸಿದ್ದರು. ಟರ್ಕಿ, ಕತಾರ್ ಮತ್ತು ಪಾಕಿಸ್ತಾನ, ಎಲ್ಲಾ ಮುಸ್ಲಿಂ ರಾಷ್ಟ್ರಗಳು ಹೆಣ್ಣುಮಕ್ಕಳ ವಿಶ್ವವಿದ್ಯಾನಿಲಯದ ನಿಷೇಧದ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿವೆ ಮತ್ತು ಅಧಿಕಾರಿಗಳು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಅಥವಾ ಮರುಪರಿಶೀಲಿಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಶಿಕ್ಷಣ ನೀತಿಯನ್ನು ಮರುಪರಿಶೀಲಿಸಿದ ತಾಲಿಬಾನ್ ಸಚಿವಾಲಯ 6ನೇ ತರಗತಿಯೊಳಗಿನ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಸ್ತು ಎಂದಿದೆ.