ಕೇಂದ್ರ ಸರ್ಕಾರ 69ನೇ ಆವೃತ್ತಿಯ ನ್ಯಾಷನಲ್ ಫಿಲ್ಮ್ ಅವಾರ್ಡ್ ಅನ್ನು ಪ್ರಕಟಿಸಿದೆ. ಅತ್ಯುತ್ತಮ ಪ್ರಾದೇಶಿಕ ಚಿತ್ರಕ್ಕಾಗಿ ಮೀಸಲಿಟ್ಟ ರಾಷ್ಟ್ರೀಯ ಪ್ರಶಸ್ತಿಯು ಈ ಬಾರಿ ರಕ್ಷಿತ್ ಶೆಟ್ಟಿ ನಟನೆಯ, ಕಿರಣ್ ರಾಜ್ ನಿರ್ದೇಶನದ ಚಾರ್ಲಿ 777 ಚಿತ್ರಕ್ಕೆ ದೊರೆತಿದೆ.
ನಾನ್ ಫೀಚರ್ ಸ್ಪೆಷಲ್ ಮೆನ್ಶನ್ ವಿಭಾಗದಲ್ಲಿ ಕನ್ನಡದ ಅನಿರುದ್ ಜತ್ಕರ್ ಅವರ ಬಾಳೆ ಬಂಗಾರ ಸಿನಿಮಾ ಪ್ರಶಸ್ತಿ ಜಯಿಸಿದೆ. ಗಂಗೂಬಾಯಿ ಚಿತ್ರಕ್ಕಾಗಿ ನಟಿ ಆಲಿಯಾ ಭಟ್ ಹಾಗೂ ಮಿಮಿ ಚಿತ್ರಕ್ಕಾಗಿ ಕೃತಿ ಶನನ್ ಅತ್ಯುತ್ತಮ ನಟಿ ಪ್ರಶಸ್ತಿ ಜಯಿಸಿದ್ದಾರೆ.
ಉಳಿದಂತೆ ಪ್ರಶಸ್ತಿಗಳು ಘೋಷಣೆ ಆಗುತ್ತಿವೆ. ಭಾರತದಲ್ಲಿ ತಯಾರಾಗುವ ಅಷ್ಟೂ ಸಿನಿಮಾಗಳೂ ಈ ಸ್ಪರ್ಧೆಗೆ ಸ್ಪರ್ಧಿಸಬಹುದಾಗಿದ್ದು, ಜೊತೆಗೆ ಪ್ರಾದೇಶಿಕ ಸಿನಿಮಾಗಳಿಗೂ ಪ್ರತ್ಯೇಕವಾಗಿ ಪ್ರಶಸ್ತಿಗಳು ಮೀಸಲಿವೆ.
ಕೋವಿಡ್ ಕಾರಣದಿಂದಾಗಿ 2021ರಲ್ಲಿ ರಿಲೀಸ್ ಆಗಿರುವ ಚಿತ್ರಗಳಿಗೆ ಪ್ರಶಸ್ತಿ ಘೋಷಣೆ ಆಗಿರಲಿಲ್ಲ. ಇದೀಗ ಆ ವರ್ಷ ರಿಲೀಸ್ ಆಗಿರುವ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 2022ನೇ ಸಾಲಿನ ಚಿತ್ರಗಳನ್ನು ಇನ್ನೂ ಆಹ್ವಾನಿಸಿಲ್ಲ. ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ತಡವಾಗಿ ಪ್ರಶಸ್ತಿ ಘೋಷಣೆ ಮಾಡುತ್ತಿದೆ.
ಸಿನಿಮಾ ರಂಗಕ್ಕೆ ನೀಡುವ ದೇಶದ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ರಾಷ್ಟ್ರಪತಿಗಳೇ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ.










