ವಾಷಿಂಗ್ಟನ್ : ಅಮೆರಿಕದ ದಿ ವಾಲ್ಟ್ ಡಿಸ್ನಿ ಕಂಪನಿ 7 ಸಾವಿರ ಉದ್ಯೋಗಿಗಳನ್ನ ವಜಾಗೊಳಿಸಲು ಮುಂದಾಗಿದೆ.
2022ರ ನವೆಂಬರ್ ನಲ್ಲಿ ಮಾಜಿ ಸಿಇಒ ಬಾಬ್ ಚಾಪೆಕ್ ಅವರಿಂದ ರಾಬರ್ಟ್ ಇಗರ್ ಅವರು ನೂತನ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಕಂಪನಿಯ ಆರ್ಥಿಕ ವೆಚ್ಚ ಕಡಿತಗೊಳಿಸಲು ನಿರ್ಧರಿಸಿದ್ದು, ಅದಕ್ಕಾಗಿ ಉದ್ಯೋಗಿಗಳನ್ನ ಕಡಿತಗೊಳಿಸಲು ಮುಂದಾಗಿದ್ದಾರೆ.
ಡಿಸ್ನಿ ತನ್ನ ತ್ರೈಮಾಸಿಕ ಬೆಳವಣಿಗೆಯನ್ನು ಗಮನಿಸಿದ ನಂತರ ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರ ಕೈಗೊಂಡಿದೆ. ವಿಶ್ವದಾದ್ಯಂತ ನಮ್ಮ ಉದ್ಯೋಗಿಗಳ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕಂಪನಿಯಾದ್ಯಂತ 5.5 ಶತಕೋಟಿ ಡಾಲರ್ ಉಳಿತಾಯದ ಗುರಿ ಹೊಂದಿದ್ದು, ಅದಕ್ಕಾಗಿ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಸಿಇಒ ಹೇಳಿದ್ದಾರೆ.
ನಿರಂತರವಾಗಿ ಬೆಳವಣಿಗೆಯೊಂದಿಗೆ ಲಾಭದಾಯಕತೆ ಸಾಧಿಸುವುದು ನಮ್ಮ ಗುರಿಯಾಗಿದೆ. ಪ್ರಸ್ತುತ ನಮ್ಮ ಈ ನಿರ್ಧಾರದಿಂದ 2024 ಆರ್ಥಿಕ ವರ್ಷದ ವೇಳೆಗೆ ಡಿಸ್ನಿ ಪ್ಲಸ್ ಗರಿಷ್ಠ ಲಾಭದ ಗುರಿ ತಲುಪುತ್ತದೆ ಎಂದು ಇಗರ್ ಹೇಳಿದ್ದಾರೆ.
ಈಗಾಗಲೇ ಅಮೆಜಾನ್ 18 ಸಾವಿರ, ಮೈಕ್ರೋಸಾಫ್ಟ್ 10 ಸಾವಿರ ಹಾಗೂ ಗೂಗಲ್ 12 ಸಾವಿರ ಸೇರಿದಂತೆ ವಿವಿಧ ಕಂಪನಿಗಳು 50 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನ ತೆಗೆದು ಹಾಕಿದೆ.










