ತುಮಕೂರು: ಇಂಗ್ಲಿಷ್ ಪದ್ಯ ಹೇಳದಿದ್ದಕ್ಕೆ ಒಂದನೇ ತರಗತಿ ವಿದ್ಯಾರ್ಥಿಗೆ ಸರ್ಕಾರಿ ಶಾಲೆಯ ಶಿಕ್ಷಕಿ ಹಿಗ್ಗಾ ಮುಗ್ಗ ಥಳಿಸಿರುವ ಘಟನೆ ಮಧುಗಿರಿ ತಾಲೂಕಿನ ಬ್ಯಾಲ್ಯ ಗ್ರಾಮದಲ್ಲಿ ನಡೆದಿದೆ.ನಂದೀಶ್ ಎಂಬ ಬಾಲಕ ಇಂಗ್ಲಿಷ್ ಪದ್ಯವನ್ನು ಹೇಳಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿ ಸೌಮ್ಯ ಎಂಬುವರು ಕೋಲಿನಿಂದ ಬಾಲಕನಿಗೆ ಬಾಸುಂಡೆ ಬರುವಂತೆ ಥಳಿಸಿದ್ದಾರೆ. ಶಾಲೆಯಿಂದ ಮನೆಗೆ ವಾಪಸ್ ಬಂದಾಗ ಪೋಷಕರಿಗೆ ಬಾಲಕ ವಿಷಯ ತಿಳಿಸಿದ್ದಾನೆ. ಶಿಕ್ಷಕಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಬಾಲಕನಿಗೆ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.










