ಅಂಗವಿಕಲತೆ ಶಾಪವಲ್ಲ, ಆತ್ಮವಿಶ್ವಾಸ ಮತ್ತು ಛಲದಿಂದ ಅದನ್ನು ಮೆಟ್ಟಿನಿಂತು ಏನನ್ನು ಬೇಕಾದರೂ ಸಾಧಿಸಬಹುದು: ಸಿ.ಪಿ.ಸುರೇಶ್…

578
firstsuddi

ಚಿಕ್ಕಮಗಳೂರು: ಇಂಡೋನೇಷ್ಯಾದಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಪ್ಯಾರಾ ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ ವಿಜೇತರಾದ ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳನ್ನು ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ನಗರದಲ್ಲಿ ಭಾನುವಾರ ಆತ್ಮೀಯವಾಗಿ ಅಭಿನಂದಿಸಿತು.
ಏಷ್ಯನ್ ಪ್ಯಾರಾ ಒಲಂಪಿಕ್ಸ್ ಕ್ರೀಡಾಕೂಟದ 1500 ಮೀ. ಒಟದ ಸ್ಪರ್ಧೆಯಲ್ಲಿ ಆಶಾಕಿರಣದ ವಿದ್ಯಾರ್ಥಿಗಳಾದ ಆರ್.ರಕ್ಷಿತ ಚಿನ್ನದ ಪದಕ, ವಿ.ರಾಧಾ ಬೆಳ್ಳಿ ಪದಕ ಹಾಗೂ 400 ಮೀ. ಓಟದಲ್ಲಿ ಕಂಚಿನ ಪದಕ ಗಳಿಸಿದ್ದರು.ಲಯನ್ಸ್ ಸೇವಾ ಭವನಕ್ಕೆ ಆಗಮಿಸಿದ ವಿಜೇತ ವಿದ್ಯಾರ್ಥಿಗಳನ್ನು ಆರತಿ ಎತ್ತಿ , ನಾದಸ್ವರ ಮತ್ತು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದ ಲಯನ್ಸ್ ಮತ್ತು ಲಯನೆಸ್ ಪದಾಧಿಕಾರಿಗಳು ನಂತರ ನಡೆದ ಸಮಾರಂಭದಲ್ಲಿ ಇಬ್ಬರನ್ನೂ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಲಯನ್ಸ್ ಅಧ್ಯಕ್ಷ ಸಿ.ಪಿ.ಸುರೇಶ್ ಅಂಗವಿಕಲತೆ ಶಾಪವಲ್ಲ, ಆತ್ಮವಿಶ್ವಾಸ ಮತ್ತು ಛಲದಿಂದ ಅದನ್ನು ಮೆಟ್ಟಿನಿಂತು ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಆಶಾಕಿರಣದ ವಿದ್ಯಾರ್ಥಿಗಳು ಉತ್ತಮ ನಿದರ್ಶನವಾಗಿದ್ದು, ಅವರನ್ನು ಅಭಿನಂದಿಸುತ್ತಿರುವುದು ತಮ್ಮ ಸಂಸ್ಥೆಗೆ ಅತ್ಯಂತ ಹೆಮ್ಮೆ ತಂದಿದೆ ಎಂದರು.
ಜಿಲ್ಲಾ ರಾಜ್ಯಪಾಲರ ಪ್ರತಿನಿಧಿ ಹೆಚ್.ಸಿ.ಶಶಿಪ್ರಸಾದ್ ಮಾತನಾಡಿ ವಿದ್ಯಾರ್ಥಿಗಳು ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ ವಿಜೇತರಾಗಿ ಪ್ರಧಾನಮಂತ್ರಿಗಳಿಂದ ಪುರಸ್ಕಾರಕ್ಕೆ ಪಾತ್ರರಾಗಿರುವುದು ಆಶಾಕಿರಣ ಶಾಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.
ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್ ಮಾತನಾಡಿ ಸಮಾಜದಲ್ಲಿ ಎಲೆಮರೆ ಕಾಯಿಯಂತಿರುವ ಇಂತಹ ಸಾಧಕರನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸುವ ಕೆಲಸವನ್ನು ಲಯನ್ಸ್ ಮತ್ತು ಲಯನೆಸ್ ಸಂಸ್ಥೆ ಹೆಚ್ಚು ಮಾಡಬೇಕು ಎಂದು ಸಲಹೆ ಮಾಡಿದರು.
ಲಯನೆಸ್ ಅಧ್ಯಕ್ಷೆ ಲಕ್ಷ್ಮೀನಂಜಯ್ಯ ಮಾತನಾಡಿ ದೇಶಕ್ಕೆ ಕೀರ್ತಿ ತಂದಿರುವ ಈ ವಿದ್ಯಾರ್ಥಿಗಳು ನಮ್ಮ ಊರಿನವರು ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಆರ್.ರಕ್ಷಿತ ಮತ್ತು ವಿ.ರಾಧ ತಮ್ಮ ಸಾಧನೆಗೆ ಆಶಾಕಿರಣ ಅಂಧಮಕ್ಕಳ ಶಾಲೆ ಮತ್ತು ಅದರ ಅಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ ಅವರ ಪ್ರೋತ್ಸಾಹ ಕಾರಣ ಎಂದು ತಿಳಿಸಿದರು.
ಇದೇ ವೇಳೆ ರಾಜ್ಯಪಾಲರ ಜಿಲ್ಲಾ ಪ್ರತಿನಿಧಿ ಹೆಚ್.ಸಿ.ಶಶಿಪ್ರಸಾದ್ ಅವರನ್ನು ಸನ್ಮಾನಿಸಲಾಯಿತು, ಇತ್ತೀಚೆಗೆ ನಿಧನರಾದ ಹಿರಿಯ ನಟ ಅಂಬರೀಷ್ ಮತ್ತು ಕಾಂಗ್ರೇಸ್ ಹಿರಿಯ ಮುಖಂಡ ಜಾಫರ್ ಷರೀಫ್ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಲಯನ್ಸ್ ಕಾರ್ಯದರ್ಶಿ ಮನೋಜ್ ಬಸವರಾಜ್, ಖಜಾಂಚಿ ಜಯರಾಮೇಗೌಡ, ಮಾಜಿ ಅಧ್ಯಕ್ಷ ಕೆ.ಡಿ.ಪುಟ್ಟಣ್ಣ, ಲಯನೆಸ್ ಕಾರ್ಯದರ್ಶಿ ಮೋಹನಕುಮಾರಿ, ಆಶಾಕಿರಣ ಅಂಧಮಕ್ಕಳ ಶಾಲೆಯ ಅಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ, ಹೆಚ್.ಸಿ.ಮಹೇಶ್, ತರಬೇತುದಾರ ರಾಹುಲ್ ಉಪಸ್ಥಿತರಿದ್ದರು.