ಕಮಿಷನ್ ಪಡೆಯುತ್ತಿರುವುದನ್ನು ನಿಲ್ಲಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು: ಎಪಿಎಂಸಿ ಅಧ್ಯಕ್ಷ ಅರೇನಳ್ಳಿ ಪ್ರಕಾಶ್…

219
firstsuddi

ಚಿಕ್ಕಮಗಳೂರು: ರೈತರಿಂದ ಅಕ್ರಮವಾಗಿ ಶೇ.10 ಕಮಿಷನ್ ಪಡೆಯುತ್ತಿರುವುದನ್ನು ನಾಳೆಯಿಂದಲೇ ನಿಲ್ಲಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ಅರೇನಳ್ಳಿ ಪ್ರಕಾಶ್ ಕೃಷಿ ಉತ್ಪನ್ನ ಮಾರುಕಟ್ಟೆಯ ವರ್ತಕರಿಗೆ ಸೂಚಿಸಿದರು.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಛೇರಿಯಲ್ಲಿ ಶುಕ್ರವಾರ ನಡೆದ ವರ್ತಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನಧಿಕೃತವಾಗಿ ಕಮಿಷನ್ ಪಡೆಯುತ್ತಿರುವುದನ್ನು ನಿಲ್ಲಿಸದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು ವರ್ತಕರು ಎಪಿಎಂಸಿ ಆವರಣವನ್ನು ಸ್ವಚ್ಚವಾಗಿಡಬೇಕು, ಕಸವನ್ನು ತಮ್ಮ ಅಂಗಡಿಯ ಮುಂದೇ ಶೇಖರಿಸಿ ಇಡಬೇಕು, ಅದನ್ನು ಕೃಷಿ ಮಾರುಕಟ್ಟೆಯ ಕಾರ್ಮಿಕರು ವಿಲೇವಾರಿ ಮಾಡುತ್ತಾರೆ ಎಂದು ತಿಳಿಸಿದರು.
ಕಸವನ್ನು ತಮ್ಮ ಅಂಗಡಿಯ ಮುಂದೆ ಇಡದೇ ಎಪಿಎಂಸಿ ಆವರಣ ಅಥವಾ ಚರಂಡಿಯಲ್ಲಿ ಹಾಕುವ ವರ್ತಕರಿಗೆ ಮೊದಲ ಬಾರಿಗೆ ಮೂರು ಸಾವಿರ, ಎರಡನೇ ಸಲ ಐದು ಸಾವಿರ ರೂ ದಂಡ ವಿಧಿಸಲಾಗುವುದು, ಮೂರನೇ ಬಾರಿಯೂ ಕಸವನ್ನು ಬಿಸಾಡಿದರೆ ಅವರ ಅಂಗಡಿಯ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಎಪಿಎಂಸಿ ನಿರ್ದೇಶಕ ಬಿ.ಹೆಚ್.ಹರೀಶ್ ಮಾತನಾಡಿ ಕೃಷಿ ಉತ್ಪನ್ನ ಮಾರುಕಟ್ಟೆಯ ವರ್ತಕರು ಕಾನೂನನ್ನು ತಪ್ಪದೇ ಪಾಲಿಸಬೇಕು, ಆವರಣವನ್ನು ಸ್ವಚ್ಚವಾಗಿಡಬೇಕು ಆಗ ಮಾತ್ರ ಎಪಿಎಂಸಿ ಗೆ ಉತ್ತಮ ಹೆಸರು ಬರುತ್ತದೆ ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ವರ್ತಕರು ಎಪಿಎಂಸಿ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಜಾನುವಾರುಗಳ ಹಾವಳಿಯನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಎಪಿಎಂಸಿ ಉಪಾಧ್ಯಕ್ಷ ರಾಜೀವ್, ಸದಸ್ಯ ಹೆಚ್.ಈ.ಪ್ರಕಾಶ್, ಕಾರ್ಯದರ್ಶಿ ಅಭಿನಂದನ್ ಹಾಜರಿದ್ದರು.