ಚಿಕ್ಕಮಗಳೂರು: ತಾವು ತಲತಲಾಂತರದಿಂದ ಶವಸಂಸ್ಕಾರ ಮಾಡುತ್ತಿರುವ ಭೂಮಿಯನ್ನು ಪ.ಜಾತಿ/ಪ.ವರ್ಗದ ರುದ್ರಭೂಮಿಯನ್ನಾಗಿ ಪರಿಗಣಿಸಿ ಮುಂದೆಯೂ ಅದೇ ಜಾಗದಲ್ಲಿ ಶವಸಂಸ್ಕಾರ ಮಾಡಲು ಅನುವು ಮಾಡಿಕೊಡುವಂತೆ ತರೀಕೆರೆ ತಾಲ್ಲೂಕು ಹೆಚ್.ರಂಗಾಪುರದ ದಲಿತ ಸಮುದಾಯದವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರನ್ನು ಗುರುವಾರ ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದರು.
ತರೀಕೆರೆ ತಾಲ್ಲೂಕಿನ ಹೆಚ್.ರಂಗಾಪುರ ಗ್ರಾಮದಲ್ಲಿ 35 ದಲಿತ ಕುಟುಂಬಗಳಿದ್ದು, ತಲತಲಾಂತರದಿಂದ ನಾವುಗಳು ಗ್ರಾಮದ ಸರ್ವೆ ನಂ. 13 ರ 2.35 ಗುಂಟೆ ಜಾಗದಲ್ಲಿ ಶವ ಸಂಸ್ಕಾರವನ್ನು ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಆ ಜಾಗವನ್ನು ಬಿಟ್ಟರೆ ಶವ ಸಂಸ್ಕಾರ ಮಾಡಲು ತಮ್ಮ ಜನಾಂಗಕ್ಕೆ ಬೇರೆ ಭೂಮಿಯಿಲ್ಲ ಎಂದ ಅವರು ಈ ಹಿನ್ನೆಲೆಯಲ್ಲಿ ಅದೇ ಜಾಗವನ್ನು ತಮ್ಮ ಸಮುದಾಯಕ್ಕೆ ಶವಸಂಸ್ಕಾರಕ್ಕಾಗಿ ನೀಡುವಂತೆ ತರೀಕೆರೆ ತಹಸೀಲ್ದಾರ್, ಉಪವಿಭಾಗಾಧಿಕಾರಿ ಗ್ರಾಮ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ತಕ್ಷಣ ಮಧ್ಯ ಪ್ರವೇಶಿಸಿ ಅದೇ ಜಾಗವನ್ನು ತಮ್ಮ ಸಮುದಾಯಕ್ಕೆ ಶವ ಸಂಸ್ಕಾರ ಮಾಡಲು ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ಚಂದ್ರು, ಸಣ್ಣಯ್ಯ, ಜಿ.ಕೆ.ಕನಕರಾಜು, ಮಹೇಶ, ಚಂದ್ರಶೇಖರ್, ರಂಗನಾಥ್, ಗೋಪಿಗೌಡ, ಸುಜಾತ, ಮಂಗಳ, ಸುರೇಶ್ ಹಾಜರಿದ್ದರು.










