ಮೂಡಿಗೆರೆ :ರಾಜ್ಯದಲ್ಲಿ ಅಲ್ಲಲ್ಲಿ ದಿನದಿಂದ ದಿನಕ್ಕೆ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಮಲೆನಾಡಿನ ಬೆಟ್ಟಗೆರೆ ಗ್ರಾಮದ ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ ಘನತೆಯಿಂದ ಮೇಲೇರಿ 25 ವರ್ಷಗಳು ಪೂರೈಸಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ.
25 ವರ್ಷದ ಹಿಂದೆ ಬೆಟ್ಟಗೆರೆ ಗ್ರಾಮದಲ್ಲಿ ಪ್ರೌಡಶಾಲೆ ಇಲ್ಲದೆ ಇರುವುದರಿಂದ ಸುತ್ತಮುತ್ತಲಿನ ಗ್ರಾಮಗಳಾದ ಹಳಿಕೆ, ಬೆಟ್ಟಗೆರೆ, ತ್ರಿಪುರ, ಹ್ಯಾರಗುಡ್ಡೆ, ಬಕ್ಕಿ, ಜಾರ್‍ಗಲ್, ಗುತ್ತಿ ಸೇರಿದಂತೆ ಬೆಟ್ಟಗೆರೆ ಗ್ರಾಮಗಳ ವಿದ್ಯಾರ್ಥಿಗಳು ಪ್ರೌಡಶಿಕ್ಷಣ ಪಡೆಯಬೇಕೆಂದರೆ ದೂರದ ಮೂಡಿಗೆರೆ ಅಥವಾ ಬಣಕಲ್‍ನಲ್ಲಿರುವ ಪ್ರೌಡಶಾಲೆಗೆ ಹೋಗಬೇಕಾಗಿತ್ತು. 25 ವರ್ಷದ ಹಿಂದೆ ಸರಿಯಾದ ಬಸ್ ಸೌಕರ್ಯ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ನಡೆದುಕೊಂಡೆ ಹೋಗಬೇಕಾಗಿತ್ತು. ಈ ಭಾಗದಲ್ಲಿ ಕಾಡಾನೆಗಳ ಕಾಟವೂ ಹೆಚ್ಚಿದ್ದರಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಅನುಕೂಲಕರವಾದ ವಾತಾವರಣವಿರಲಿಲ್ಲ. ಇದನ್ನು ಮನಗಂಡ ಗ್ರಾಮದ ಹಿರಿಯರು, ಪೋಷಕರು ಗ್ರಾಮದಲ್ಲಿ ಪ್ರೌಡಶಾಲೆ ಬೇಕು ಎಂದು ಪಣತೊಟ್ಟು ಪ್ರಯತ್ನಿಸಿದ ಪರಿಣಾಮ 1993 ರಲ್ಲಿ ಬೆಟ್ಟಗೆರೆಯಲ್ಲಿ ಸರ್ಕಾರಿ ಪ್ರೌಡಶಾಲೆ ಪ್ರಾರಂಭವಾಯಿತು. ಬೆಟ್ಟಗೆರೆ ಗ್ರಾ.ಪಂ ವ್ಯಾಪ್ತಿಯ ಹಳಿಕೆ ಗ್ರಾಮದ ಉರ್ದು ಶಾಲೆ ಸಮೀಪ ಎರಡು ಕೊಠಡಿಯಲ್ಲಿ ಪ್ರಾರಂಭವಾದ ಶಾಲೆಗೆ ಹೆಚ್ಚಿನ ಕೊಠಡಿಗಳ ಅಗತ್ಯವಿರುವುದರಿಂದ ಗ್ರಾಮದ ಹಿರಿಯರು ಪೋಷಕರು ದೇಣಿಗೆ ಸಂಗ್ರಹಿಸಿ ಕಟ್ಟಡ ನಿರ್ಮಿಸಲು ಮುಂದಾದಾಗ ಆಗ ರಾಜ್ಯ ಸಚಿವ ಸಂಪುಟದಲ್ಲಿ ಪಶುಸಂಗೋಪನಾ ಸಚಿವರಾಗಿದ್ದ ಬೆಟ್ಟಗೆರೆ ಗ್ರಾಮದವರೇ ಆದ ಮಾಜಿ ಶಾಸಕ ಬಿ.ಬಿ ನಿಂಗಯ್ಯ ತಮ್ಮ ತಂದೆ ತಾಯಿಯ ಹೆಸರಿನಲ್ಲಿ ಶಾಲೆಯ ಅಭಿವೃದ್ದಿಗೆ ಮುಂದಾದರು. ಇದರ ಫಲವಾಗಿ ಬೆಟ್ಟಗೆರೆ ಸರ್ಕಾರಿ ಆಸ್ಪತ್ರೆಯ ಸಮೀಪ ಸುಸಜ್ಜಿತ ಕಟ್ಟಡ ತಲೆ ಎತ್ತಿತು.ಇಂದು ಯಾವುದೆ ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲದಂತೆ ಸಕಲ ಸೌಕರ್ಯಗಳನ್ನು ಹೊಂದಿರುವ ಮಾದರಿ ಸರ್ಕಾರಿ ಪ್ರೌಢಶಾಲೆ ಸ್ಮಾರ್ಟ್ ಕ್ಲಾಸ್ ಮೂಲಕ ವಿವಿಧ ಸೌಲಭ್ಯದೊಂದಿಗೆ ಮಕ್ಕಳಿಗೆ ಮನದಟ್ಟುವ ಶಿಕ್ಷಣ ನೀಡುತ್ತಿದೆ ಎಂದರೆ ತಪ್ಪಲ್ಲ. ಜೊತೆಗೆ ಬಾಲಕರ ವಿದ್ಯಾರ್ಥಿ ನಿಲಯವೂ ಇಲ್ಲಿ ಸ್ಥಾಪಿಸಲಾಗಿದೆ.
1993ರಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ ಈವರೆಗೂ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಲೆ, ಸಾಹಿತ್ಯ, ಸಂಗೀತ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾರೆ. 25 ರ ಸಂವತ್ಸರಕ್ಕೆ ಇಡೀ ಗ್ರಾಮವೇ ಸಜ್ಜಾಗಿದ್ದು,ಬೆಳ್ಳಿ ಹಬ್ಬದ ನೆನಪಿಗಾಗಿ ವಿವಿಧ ಬರಹಗಾರರ ಬರಹದ ಸಂಚಿಕೆಯನ್ನು ಹೊರ ತರಲಾಗುತ್ತಿದ್ದು ಸ್ಥಳೀಯ ಪ್ರತಿಭಾವಂತರ ಪ್ರತಿಭೆ ಈ ಸಂಚಿಕೆಯಲ್ಲಿ ಅನಾವರಣವಾಗಲಿದೆ.ಇಲ್ಲಿ ಶಿಕ್ಷಣ ನೀಡಿದ ಶಿಕ್ಷಕರಿಗೆ, ದಾನಿಗಳಿಗೆ, ತೆರೆಮರೆಯಲ್ಲಿ ಶಾಲೆಗಾಗಿ ಶ್ರಮಿಸಿದವರಿಗೆ ಈ ಶಾಲೆಯ ಬೆಳ್ಳಿ ಮಹೋತ್ಸವದ ಕೀರ್ತಿ ಸಲ್ಲುತ್ತದೆ.
ತನು,ಕೊಟ್ಟಿಗೆಹಾರ










