ನಮ್ಮ ಸೈನಿಕರು ವೀರ ಮರಣ ಹೊಂದಿರುವ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ನೈತಿಕ ಬೆಂಬಲ ನೀಡಿ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು :ಎಸ್.ಎಲ್.ಧರ್ಮೇಗೌಡ…

380
firstsuddi

ಚಿಕ್ಕಮಗಳೂರು: ಕಾಶ್ಮೀರದ ನೆಲದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ದೇಶದ ಗಡಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ನಮ್ಮ ಸೈನಿಕರು ವೀರ ಮರಣ ಹೊಂದಿರುವ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ನೈತಿಕ ಬೆಂಬಲ ನೀಡಿ ಸ್ಥೈರ್ಯ ತುಂಬುವ ಕೆಲಸ ಮಾಡುವ ಕಾರ್ಯ ಪ್ರತಿಯೊಬ್ಬ ನಾಗರೀಕರೂ ಮಾಡ ಬೇಕೆಂದು ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ತಿಳಿಸಿದ್ದಾರೆ.
ಅವರು ನಗರದ ಡಿ.ಸಿ.ಸಿ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ನಡೆದ ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿ ಸಭೆಯಲ್ಲಿ ಕಾಶ್ಮೀರದ ಪುಲ್ವಾಮಾದಲ್ಲಿ ಇತ್ತೀಚೆಗೆ ಹುತಾತ್ಮರಾದ ವೀರ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ದೇಶಸೇವೆಯಲ್ಲಿ ತೊಡಗಿರುವ ನಮ್ಮ ವೀರ ಸೈನಿಕರು ದೇಶಕ್ಕಾಗಿ ಹೋರಾಡಿ ವೀರ ಮರಣ ಹೊಂದಿರುವ ಸಂದರ್ಭ ನಮ್ಮೆಲ್ಲರಿಗೂ ನೋವು ತರುತ್ತದೆ. ಆದರೆ, ಸೈನಿಕರ ಕುಟುಂಬಗಳಿಗೆ ಆಗುವ ಆಘಾತ ವಿವರಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ನಾವುಗಳು ಅಂತಹ ಕುಟುಂಬಗಳ ಶಕ್ತಿಯಾಗಬೇಕು, ನೆರವಾಗಬೇಕು, ಬೆನ್ನೆಲುಬಾಗಬೇಕು .  ಅದರಲ್ಲೂ ಯುವ ಜನಾಂಗ ಹೆಚ್ಚು ಕ್ರಿಯಾತ್ಮಕವಾಗಿ ಈ ಸಂದರ್ಭದಲ್ಲಿ ಸ್ಪಂದಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮೌನಾಚರಣೆ ನಡೆಸುವ ಮೂಲಕ ವೀರ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬ್ಯಾಂಕಿನ ಆಡಳಿತ ಮಂಡಳಿ ಉಪಾಧ್ಯಕ್ಷ ದಿನೇಶ್ ಹೆಗ್ಡೆ,ನಿರ್ದೇಶಕರುಗಳಾದ ಶಾಸಕರಾದ ಬೆಳ್ಳಿ ಪ್ರಕಾಶ್, ಟಿ.ಡಿ.ಸತ್ಯನ್,ಟಿ.ಇ.ಮಂಜುನಾಥ್, ಬಿ.ಎಲ್.ಸಂದೀಪ್, ನೀಲೇಶ್,ರವಿಕುಮಾರ್,ಟಿ.ಎಲ್.ರಮೇಶ್,ಕೆ.ಪಿ.ಕುಮಾರ್,ಕೆ.ಎಸ್.ರವೀಂದ್ರ,ವ್ಯವಸ್ಥಾಪಕ ನಿರ್ದೇಶಕರಾದ ನಾಗೇಶ್ ಎಸ್.ಡೋಂಗ್ರೆ ಉಪಸ್ಥಿತರಿದ್ದರು.