ಚಿಕ್ಕಮಗಳೂರು:ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಶ್ರೀ ಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮುತುವರ್ಜಿಯಿಂದ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜೆಸಿಂತಾ ಅನಿಲ್‍ಕುಮಾರ್ ಹೇಳಿದರು.
ನಗರದ ಕಾರ್ಮಿಕರ ಭವಿಷ್ಯನಿಧಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಧಾನಮಂತ್ರಿ ಶ್ರಮ್‍ಯೋಗಿ ಮಾನ್‍ಧನ್ ಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪರ ಕಾಳಜಿಯಿಂದಾಗಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗಾಗಿ ಆಯುಷ್ಮಾನ್ ಭಾರತ್ ಸೇರಿದಂತೆ ಹಲವು ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ರೂಪಿಸಿದೆ ಅವು ಫಲಾನುಭವಿಗಳಿಗೆ ತಲುಪಬೇಕಾದರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನೂತನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ನಗರಸಭೆ ಉಪಾಧ್ಯಕ್ಷ ಸುಧೀರ್ ಕೇಂದ್ರ ಸರ್ಕಾರದ ಯಾವುದೇ ಜನಪರ ಯೋಜನೆಗಳೂ ನೆನೆಗುದಿಗೆ ಬೀಳದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭವಿಷ್ಯನಿಧಿ ಆಯುಕ್ತ ಸಚಿನ್‍ಶೆಟ್ಟಿ, ಮಾಸಿಕ ಹದಿನೈದು ಸಾವಿರಕ್ಕಿಂತ ಕಡಿಮೆ ಆದಾಯವಿರುವ ಅಸಂಘಟಿತ ಕಾರ್ಮಿಕರಿಗಾಗಿ ಈ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.
18 ರಿಂದ 40 ವರ್ಷದ ಒಳಗಿರುವ ಅಸಂಘಟಿತ ಕಾರ್ಮಿಕರು ಈ ಯೋಜನೆಯಡಿ ಕಟ್ಟುವ ಮಾಸಿಕ ಕಂತಿನ ಶುಲ್ಕಕ್ಕೆ ಅಷ್ಟೇ ಪ್ರಮಾಣದ ಹಣವನ್ನು ಕೇಂದ್ರ ಸರ್ಕಾರ ತುಂಬುತ್ತದೆ, 60 ವರ್ಷದ ನಂತರ ಫಲಾನುಭವಿಗೆ ಮಾಸಿಕ ಮೂರು ಸಾವಿರ ರೂ ಪಿಂಚಣಿ ದೊರೆಯುತ್ತದೆ, ಪಿಂಚಣಿದಾರ ನಿಧನ ಹೊಂದಿದಲ್ಲಿ ಅವರ ಪತ್ನಿಗೆ ಪಿಂಚಣಿ ನೀಡಲಾಗುವುದು ಎಂದು ತಿಳಿಸಿದರು.
ಸಾಮಾನ್ಯ ಸೇವಾ ಕೇಂದ್ರಗಳ ಜಿಲ್ಲಾ ವ್ಯವಸ್ಥಾಪಕ ಸಿ.ಎನ್.ಹೇಮಂತ್ ಕುಮಾರ್ ಮಾತನಾಡಿ ಅಸಂಘಟಿತ ಕಾರ್ಮಿಕರು ಈ ಪಿಂಚಣಿ ಯೋಜನೆಗೆ ಭವಿಷ್ಯ ನಿಧಿ ಕಛೇರಿಯಲ್ಲಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ನೂತನ ಯೋಜನೆಗೆ ಹೆಸರು ನೋಂದಾಯಿಸಿದ ಕಾರ್ಮಿಕರಿಗೆ ಸಮಾರಂಭದಲ್ಲಿ ಗುರುತಿನ ಚೀಟಿ ವಿತರಿಸಲಾಯಿತು.ಇದೇ ವೇಳೆ ಗುಜರಾತ್‍ನ ಥಾರ್‍ನಲ್ಲಿ ನಡೆದ ಯೋಜನೆಯ ಉದ್ಘಾಟನಾ ಸಮಾರಂಭದ ನೇರಪ್ರಸಾರವನ್ನು ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು.
ಭಾರತೀಯ ಜೀವ ವಿಮಾ ನಿಗಮದ ನಗರಶಾಖೆಯ ವ್ಯವಸ್ಥಾಪಕ ಪುರಂದರ, ಸಹಾಯಕ ಕಾರ್ಮಿಕ ಅಯುಕ್ತ ಜಾನ್ಸನ್, ಸಾಮಾಜಿಕ ಭದ್ರತಾ ಯೋಜನೆಯ ಸಹಾಯಕ ನಿರ್ದೇಶಕಿ ಬಿ.ಎನ್.ಶಶಿಕಲಾ, ಕೆಜಿಎಫ್ ಮಾಜಿ ಅಧ್ಯಕ್ಷ ಅತ್ತಿಕಟ್ಟೆ ಜಗನ್ನಾಥ್, ಕಮಲಾಕ್ಷ ವಿವೇಕಾನಂದ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಶ್ರೀ ಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮುತುವರ್ಜಿಯಿಂದ ಮಾಡಬೇಕು :ಜೆಸಿಂತಾ...










