ಮೂಡಿಗೆರೆ : ಇತ್ತೀಚೆಗೆ ಬಾಳೂರಿನ ಸಂಪಿಗೆಖಾನ್ ಸಮೀಪದ ಕಾಂತಿ ಎಸ್ಟೇಟ್ ನಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಮೂಡಿಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನೇಶ್ ಎಸ್ (22) ಎಂಬಾತ ಕಾಂತಿ ಎಸ್ಟೇಟ್ ನ ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಕದ್ದಮೆ ಸಂಖ್ಯೆ 19/2019 ಕಲಂ 454, 457, 380 ಪ್ರಕರಣವನ್ನು ದಾಖಲಿಸಲಾಗಿದ್ದು, ಕಳೆದ ಕೆಲ ದಿನಗಳ ಹಿಂದೆ ಈತ ಕಾಂತಿ ಎಸ್ಟೇಟ್ ನಲ್ಲಿ ಚಿನ್ನಾಭರಣವನ್ನು ಕಳ್ಳತನ ಮಾಡಿ ಹಿರೇಬೈಲ್, ಕಳಸ, ಕಾರ್ಕಳ ಮೂಡಿಗೆರೆ ಬ್ಯಾಂಕ್ ಗಳಲ್ಲಿ ಹಾಗೂ ಫೈನಾನ್ಸ್ ಹಾಗೂ ಗಿರವಿ ಅಂಗಡಿಗಳಲ್ಲಿ ಅಡವಿಟ್ಟಿದ್ದ. ಪ್ರಕರಣ ಕುರಿತು ತನಿಖೆ ನಡೆಸಿದ ಮೂಡಿಗೆರೆ ಸರ್ಕಲ್ ಇನ್ಸ್‍ಪೆಕ್ಟರ್‍ರಾದ ಕೆ.ಕೆ ರಘು ಹಾಗೂ ಕ್ರೈಂ ಬ್ರಾಂಚ್ ಕಾನ್ಸ್ಟೇಬಲ್ ಗಳಾದ ಮಂಜುನಾಥ್, ಗಿರೀಶ್ ಬಿ.ಸಿ, ರವಿ, ಕಲ್ಲೇಶ್ ತಂಡ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯಿಂದ 2.40.000 ರೂ ಮೌಲ್ಯದ 80 ಗ್ರಾಂ ತೂಕದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.










