ಚಿಕ್ಕಮಗಳೂರು: ಜವಾಬ್ದಾರಿತನ, ಶಿಸ್ತು ಮತ್ತು ಸಮಯ ಪ್ರಜ್ಞೆ ಇರುವವರು ಮಾತ್ರ ಲೆಕ್ಕ ಪರಿಶೋಧಕ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಮಂಗಳೂರಿನ ಲೆಕ್ಕ ಪರಿಶೋಧಕ ಗೋಪಾಲಕೃಷ್ಣ ಭಟ್ ಹೇಳಿದರು.
ಸಿ.ಎ ಕೋರ್ಸ್‍ಗೆ ಸೇರಬಯಸುವ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ನಗರದ ಸೇಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಉಚಿತ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲೆಕ್ಕ ಪರಿಶೋಧಕ ವೃತ್ತಿ ಅತ್ಯಂತ ಜವಾಬ್ದಾರಿಯುತವಾದ ವೃತ್ತಿ. ಆ ಕೆಲಸ ಮಾಡಬಯಸುವವರಿಗೆ ಜವಾಬ್ದಾರಿ, ಸಮಯ ಪ್ರಜ್ಞೆ ಮತ್ತು ಶಿಸ್ತು ಅತ್ಯಂತ ಅಗತ್ಯ ಎಂದ ಅವರು ಅವುಗಳನ್ನು ಬೆಳೆಸಿಕೊಂಡಿರುವವರು ಬೇಡಿಕೆಯ ಲೆಕ್ಕ ಪರಿಶೋಧಕರಾಗಿ ಬೆಳೆಯುತ್ತಾರೆ ಎಂದು ಕಿವಿಮಾತು ಹೇಳಿದರು.
ಲೆಕ್ಕ ಪರಿಶೋಧಕ ವೃತ್ತಿಗೆ ಅತ್ಯಂತ ಗೌರವ ಮತ್ತು ಹೆಚ್ಚಿನ ಬೇಡಿಕೆ ಇದೆ ಎಂದ ಅವರು ಈ ಹಿನ್ನೆಲೆಯಲ್ಲಿ ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಕಾಡೆಮಿಯ ಪ್ರಾಂಶುಪಾಲ ಅನೀಷ್ ಥಾಮಸ್ ಸಿ.ಎ. ಕೋರ್ಸ್‍ಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಕಾಡೆಮಿ ಅಧ್ಯಕ್ಷ ಡಾ|| ಗ್ರೆಗರಿ ಲೋಬೋ, ವಾಣಿಜ್ಯ ವಿಭಾಗದ ಸಹ ಸಂಯೋಜಕ ಪ್ರಸನ್ನ ಉಪಸ್ಥಿತರಿದ್ದರು.










