ಬೆಂಗಳೂರು : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ 1800 ಕೋಟಿ ಡೈರಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರು ದಿವಾಳಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ಸಾರ್ವಜನಿಕವಾಗಿ ಚರ್ಚಿಸಲು ಯಾವುದೇ ಅಭಿವೃದ್ಧಿಪರ ವಿಚಾರಗಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಜನಪ್ರಿಯತೆ ದಿನ ಕಳೆದಂತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. 2019 ರ ಚುನಾವಣೆಯಲ್ಲಿ ತಮಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವುದು ಕಾಂಗ್ರೆಸ್ ನಾಯಕರಿಗೆ ಅರಿವಾಗಿದೆ. ಕಾಂಗ್ರೆಸ್ ನಾಯಕರು ಚುನಾವಣೆಗೂ ಮೊದಲೇ ಸೋಲೊಪ್ಪಿಕೊಂಡಿದ್ದಾರೆ. ಈಗ ಪ್ರಸ್ತಾಪಿಸಿರುವ ಭ್ರಷ್ಟಾಚಾರ ಆರೋಪದ ಕುರಿತು ಈ ಹಿಂದೆಯೇ ವಿಚಾರಣೆ ನಡೆದು ಇದಕ್ಕೆ ಸಂಬಂಧಿಸಿದ ದಾಖಲೆಗಳೆಲ್ಲವೂ ನಕಲಿ ಎಂದು ಸಾಬೀತಾಗಿದೆ. ಹಿಂದೆಯೇ ಆದಾಯ ತೆರಿಗೆ ಇಲಾಖೆ ದಾಖಲೆಗಳನ್ನು ಮತ್ತು ನನ್ನ ಕೈ ಬರಹ ಹಾಗೂ ಸಹಿಯನ್ನು ಕೂಡಾ ತಪಾಸಣೆಗೆ ಒಳಪಡಿಸಿದ್ದು ಅವೆಲ್ಲವೂ ನಕಲಿ ಎಂದು ದೃಢಪಟ್ಟಿದೆ. ಕಾಂಗ್ರೆಸ್ ನಾಯಕರು ದುರುದ್ದೇಶಪೂರಿತ ಅಪಪ್ರಚಾರ ಮತ್ತು ನಕಲಿ ಸುದ್ದಿಗಳನ್ನು ಹರಡುವುದರಲ್ಲಿ ನಿಸ್ಸೀಮರು. ರಾಜಕೀಯವಾಗಿ ಲಾಭ ಪಡೆಯುವ ಉದ್ದೇಶ ಬಿಟ್ಟರೆ ಇದರ ಹಿಂದೆ ಯಾವುದೇ ವಾಸ್ತವಾಂಶ ಇಲ್ಲ. ಕಾಂಗ್ರೆಸ್ ನಾಯಕರು ಪ್ರಸ್ತಾಪಿಸಿರುವ ವಿಷಯಗಳು ಅಪ್ರಸ್ತುತ ಮತ್ತು ಸುಳ್ಳಿನ ಕಂತೆ. ಈ ವಿಷಯ ಮುಗಿದ ಅಧ್ಯಾಯ ಎಂದು ಅವರು ತಿಳಿಸಿದ್ದಾರೆ.










