ಧರ್ಮ ಮತ್ತು ಜಾತಿಗಳ ನಡುವೆ ನಡೆಯುತ್ತಿರುವ ಸಂಘರ್ಷ ದೇಶದ ಅಭಿವೃದ್ದಿಗೆ ಮಾರಕವಾಗಿದೆ : ಡಾ|| ರೇಣುಕ ಶಿವಾಚಾರ್ಯ ಸ್ವಾಮೀಜಿ…

225
firstsuddi

ಚಿಕ್ಕಮಗಳೂರು : ಧರ್ಮ ಮತ್ತು ಜಾತಿಗಳ ನಡುವೆ ಇಂದು ವ್ಯಾಪಕವಾಗಿ ನಡೆಯುತ್ತಿರುವ ಸಂಘರ್ಷ ದೇಶದ ಅಭಿವೃದ್ದಿಗೆ ಮಾರಕವಾಗಿದೆ ಎಂದು ರಂಭಾಪುರಿ ಮಠಾಧೀಶ ಶ್ರೀ ಡಾ|| ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನಲ್ಲೂರಿನಲ್ಲಿ ಶ್ರೀ ವೀರಭದ್ರೇಶ್ವರಸ್ವಾಮಿ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ನಡೆದ ಜನಜಾಗೃತಿ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಜಾತಿಗಿಂತ ಧರ್ಮ ಬಹಳ ದೊಡ್ಡದು , ಧರ್ಮದಲ್ಲಿರುವಂತಹ ದೂರದೃಷ್ಠಿ, ಭಾವನಾತ್ಮಕ ಸಂಬಂಧ ಜಾತಿಗಳಲ್ಲಿ ಕಾಣುವುದಕ್ಕೆ ಸಾಧ್ಯವಿಲ್ಲ ಇಂದಿನ ದಿನಮಾನಗಳಲ್ಲಿ ಜಾತಿಗಳು ಬೆಳೆಯುತ್ತಿವೆಯೇ ಹೊರೆತು ಧರ್ಮದ ಆದರ್ಶಗಳಾಗಲೀ, ಸಾಮಾಜಿಕ ಮೌಲ್ಯಗಳಾಗಲೀ ಬೆಳೆಯುತ್ತಿಲ್ಲ ಎಂದು ವಿಷಾದಿಸಿದ ಅವರು ಇಂದಿನ ಎಲ್ಲಾ ದುರಂತಗಳಿಗೆ ಇದೇ ಕಾರಣ ಎಂದರು.
ವಿಜ್ಞಾನದ ಸಹಾಯವಿಲ್ಲದೆ ದೇಶದ ಪ್ರಗತಿ ಸಾಧ್ಯವಿಲ್ಲ. ವಿಜ್ಞಾನ ಧರ್ಮದ ಸಹಯೋಗದಲ್ಲಿ ಬೆರೆತು ನಡೆದರೆ ಮಾತ್ರ ಆರೊಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಆದರೆ ವಿಜ್ಞಾನದಿಂದ ವಿಧ್ವಂಸಕ ಕೃತ್ಯಗಳು ನಡೆಯುತ್ತಿರುವುದು ದುರ್ದೈವದ ಸಂಗತಿ ಎಂದು ಹೇಳಿದರು.
ಕಾಲಮಾನಕ್ಕೆ ತಕ್ಕಂತೆ ನಾವು ಪರಿವರ್ತನೆ ಹೊಂದಬೇಕು ಆದರೆ ಅವರ ಭರದಲ್ಲಿ ನಮ್ಮ ಸಂಸ್ಕøತಿ, ಸಂಸ್ಕಾರ ಮತ್ತು ಆದರ್ಶ ಪರಂಪರೆಯನ್ನು ಬಿಡಬಾರದು, ಸಂಸ್ಕಾರದಿಂದ ಮಾತ್ರ ಮನುಷ್ಯ ಸಚ್ಚಾರಿತ್ರ್ಯವಂತನಾಗಲು ಸಾಧ್ಯವಾಗುತ್ತದೆ ಎಂದರು.
ಮನುಷ್ಯನಿಗೆ ಎಷ್ಟೇ ಐಶ್ವರ್ಯ, ಅಧಿಕಾರ ಅಂತಸ್ತು ಇದ್ದರೂ ಅವುಗಳಿಂದ ಮಾನಸಿಕ ಶಾಂತಿ ಮತ್ತು ನೆಮ್ಮದಿ ದೊರೆಯುವುದಿಲ್ಲ, ಧರ್ಮ ಮಾರ್ಗದಲ್ಲಿ ನಡೆದರೆ ಮಾತ್ರ ಆತನಿಗೆ ಅವು ಲಭಿಸುತ್ತದೆ ಎಂದು ತಿಳಿಸಿದರು.
ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಗ್ರಾಮೀಣ ಜನರು ತಮ್ಮ ಧರ್ಮ, ಸಂಪ್ರದಾಯ ಮತ್ತು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್‍ನ ಉಪಾಧ್ಯಕ್ಷೆ ಗೌರಮ್ಮ ಬಸವೇಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು, ದೇವಾಲಯದ ನಿರ್ಮಾಣಕ್ಕೆ ದೇಣಿಗೆ ನೀಡಿದವರು ಮತ್ತು ಸಹಕರಿಸಿದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಹುಲಿಕೆರೆ ದೊಡ್ಡಮಠದ ಶ್ರೀ ವಿರೂಪಾಕ್ಷ ಲಿಂಗ ಶಿವಾಚಾರ್ಯ ಸ್ವಾಮೀಜಿ, ಬೀರೂರು ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಸಮಾಜದ ಮುಖಂಡ ಬಿ.ಬಿ.ರೇಣುಕಾರ್ಯ, ಸಮಾಜದ ಅಧ್ಯಕ್ಷ ಸಿ.ಬಿ.ಮಲ್ಲೇಗೌಡ, ರೇಣುಕಾಚಾರ್ಯ ಟ್ರಸ್ಟ್‍ನ ಕಾರ್ಯದರ್ಶಿ ಸಿ.ವಿ.ಮಲ್ಲಿಕಾರ್ಜುನ್, ಖಜಾಂಚಿ ಯು.ಎಂ.ಬಸವರಾಜ್, ಪಂಚಾಚಾರ್ಯ ಸೇವಾಸಮಿತಿಯ ಗೌವರಾಧ್ಯಕ್ಷ ಸಿ.ವಿ.ಜಯದೇವ್, ಎನ್.ಈಶ್ವರಪ್ಪ ಕೋಟೆ, ಓಂಕಾರಸ್ವಾಮಿ, ಸಿಪಿಐ ಮುಖಂಡ ಹೆಚ್.ಎಂ.ರೇಣುಕಾರಾಧ್ಯ ಉಪಸ್ಥಿತರಿದ್ದರು.
ತನುಜಾ ರಾಜೇಶ್ ಕಾರ್ಯಕ್ರಮವನ್ನು ನಿರೂಪಿಸಿದರು, ಪಂಚಾಕ್ಷರಯ್ಯ ಸ್ವಾಗತಿಸಿದರು, ಬಸವರಾಜಯ್ಯ ಶಾಸ್ತ್ರಿ ವಂದಿಸಿದರು.