ಅತೃಪ್ತ ಶಾಸಕರ ರಾಜೀನಾಮೆ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್…

217
firstsuddi

ನವದೆಹಲಿ : ಅತೃಪ್ತ ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರಕ್ಕೆ ಮುಂದೂಡಿದ್ದು, ಮಂಗಳವಾರದವರೆಗೂ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಆದೇಶ ಹೊರಡಿಸಿದ್ದು, ಶಾಸಕರ ಅನರ್ಹತೆ ಕೈಗೊಳ್ಳುವಂತಿಲ್ಲ ಹಾಗೂ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವಂತಿಲ್ಲ ಎಂದು ಮುಖ್ಯ ನ್ಯಾಯಾಧೀಶ ರಂಜನ್ ಗೋಗಯ್ ಅವರು ತಿಳಿಸಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಯಿತು.
ಅತೃಪ್ತ ಶಾಸಕರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ವಾದ ಮಂಡಿಸಿ ಸ್ಪೀಕರ್ ಅವರು ಉದ್ದೇಶಪೂರ್ವಕವಾಗಿ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುತ್ತಿಲ್ಲ. ರಾಜೀನಾಮೆಯನ್ನು ಅಂಗೀಕರಿಸಲು ಕೇವಲ 10 ಸೆಕೆಂಡ್ ಸಾಕು. ಶಾಸಕರು ನೇರವಾಗಿ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ನೀಡಿದರೂ ಅಂಗೀಕರಿಸಲು ವಿಳಂಬ ಮಾಡುತ್ತಿದ್ದಾರೆ. ಶಾಸಕರನ್ನು ಅನರ್ಹಗೊಳಿಸಬೇಕೆಂದೇ ಶಾಸಕರ ವಿರುದ್ಧ ವಿಪ್ ಜಾರಿಗೊಳಿಸಿದ್ದಾರೆ. ಹೀಗಾಗಿ ಶಾಸಕರ ರಾಜೀನಾಮೆಯನ್ನು ಕೂಡಲೇ ಅಂಗೀಕರಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸ್ಪೀಕರ್ ಅವರ ಪರವಾಗಿ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ ಅವರು ಸ್ಪೀಕರ್ ಅವರಿಗೆ ಆದೇಶ ನೀಡಲು ನ್ಯಾಯಾಲಯಕ್ಕೆ ಯಾವುದೇ ಅಧಿಕಾರ ಇಲ್ಲ. ಸ್ಪೀಕರ್ ಅವರು ಈಗಾಗಲೆ ಶಾಸಕರ ರಾಜೀನಾಮೆಯನ್ನು ಸ್ವೀಕರಿಸಿ ಪರಿಶೀಲಿಸಿರುವುದಾಗಿ ಹೇಳಿದ್ದಾರೆ. ಶಾಸಕರು ರಾಜೀನಾಮೆ ತೆಗೆದುಕೊಳ್ಳಲು ಸರಿಯಾದ ಕಾರಣ ಬೇಕು ಹೀಗಾಗಿ ಕೆಲವು ಶಾಸಕರ ವಿಚಾರಣೆ ಮಾಡಲು ದಿನಾಂಕ ನಿಗಧಿಪಡಿಸಿದ್ದಾರೆ ಎಂದು ಹೇಳಿದರು. ಬಳಿಕ ಮಾತನಾಡಿದ ನ್ಯಾಯಾಧೀಶರು ಸ್ಪೀಕರ್ ಅವರಿಗೆ ನ್ಯಾಯಾಲಯ ಆದೇಶ ನೀಡುವ ಅಧಿಕಾರ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಆದೇಶ ನೀಡಲಾಗಿದೆ ಎಂದು ಹೇಳಿದರು.
ಬಳಿಕ ಮುಕುಲ್ ರೋಹ್ಟಗಿ ಅವರು ವಾದ ಮಂಡಿಸಿ 8ಜನ ಶಾಸಕರು ರಾಜೀನಾಮೆ ಸಲ್ಲಿಸಿದ ಬಳಿಕ ಅನರ್ಹತೆಯ ವಿಚಾರ ಆರಂಭವಾಗಿದ್ದು, ಹೀಗಾಗಿ ಪ್ರತಿವಾದಿಗಳ ಮನವಿಯನ್ನು ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿಕೊಂಡರು. ಎರಡು ಕಡೆಯ ವಾದವನ್ನು ಕೇಳಿದ ನ್ಯಾಯಾಲಯ ಈಗಾಗಲೇ ಶಾಸಕರ ರಾಜೀನಾಮೆ ಹಾಗೂ ಅನರ್ಹತೆ ವಿಷಯಕ್ಕೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿದೆ. ಹಾಗೂ ನ್ಯಾಯಾಲಯ ಸ್ಪೀಕರ್ ಅವರಿಗೆ ಆದೇಶ ನೀಡುವುದು ಸರಿಯೋ ತಪ್ಪೋ ಎಂಬುವುದರ ಬಗ್ಗೆಯೂ ಪ್ರಶ್ನೆ ಎದಿದ್ದು, ಹೀಗಾಗಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು.