ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ಅನರ್ಹತೆ ಮಾಡಬೇಕು : ಅಭಿಷೇಕ್ ಮನು ಸಿಂಘ್ವಿ ವಾದ…

298
firstsuddi

ನವದೆಹಲಿ : ಅತೃಪ್ತ ಶಾಸಕರ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಶಾಸಕರ ಪರ ವಾದ ಮಂಡಿಸಿದ ಮುಕುಲ್ ರೋಹ್ಟಗಿ ಅವರ ವಾದ ಮುಕ್ತಾಯವಾದ ಬಳಿಕ ಸ್ಪೀಕರ್ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರು ಮುಕುಲ್ ರೋಹ್ಟಗಿ ಅವರ ವಾದಕ್ಕೆ ಪ್ರತ್ಯುತ್ತರ ನೀಡಿದ್ದು, ಸ್ಪೀಕರ್ ಅವರು ರಾಜೀನಾಮೆ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದ್ದಾರೆ. ಕೆಲವರನ್ನೂ ವಿಚಾರಣೆಗೂ ಕೂಡಾ ಕರೆದಿದ್ದಾರೆ. ರಾಜೀನಾಮೆ ಹಾಗೂ ಅನರ್ಹತೆಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳುವುದು ತಪ್ಪು. ಅನರ್ಹತೆ ಹಾಗೂ ರಾಜೀನಾಮೆಗೆ ಸಂಬಂಧವಿದೆ. ಅತೃಪ್ತ ಶಾಸಕರು ರಾಜೀನಾಮೆ ನೀಡುವ ಮುನ್ನವೇ ಅವರ ಮೇಲೆ ಅನರ್ಹತೆಯ ದೂರು ಸಲ್ಲಿಕೆಯಾಗಿತ್ತು. ರಾಜೀನಾಮೆ ಮತ್ತು ಅನರ್ಹತೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಸ್ಪೀಕರ್ ಅವರಿಗೆ ಇದೆ. ವಿಪ್ ಉಲ್ಲಂಘನೆ ಮಾಡಿದರೆ ಶಾಸಕರನ್ನು ಅನರ್ಹತೆ ಮಾಡುವ ಅಧಿಕಾರ ಸ್ಪೀಕರ್ ಹೊಂದಿದ್ದಾರೆ. ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ಅನರ್ಹತೆ ಮಾಡಬೇಕು.
ಒಂದೇ ರಾತ್ರಿಯಲ್ಲಿ ಎಲ್ಲಾ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಲು ಸಾಧ್ಯವಾಗುವುದಿಲ್ಲ. ತ್ವರಿತವಾಗಿ ರಾಜೀನಾಮೆ ಅಂಗೀಕರಿಸುವುದು ಸೂಕ್ತ ತೀರ್ಮಾನವಲ್ಲ. ನಿಯಮದ ಪ್ರಕಾರ ಶಾಸಕರು ಖುದ್ದಾಗಿ ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆಯನ್ನು ಸಲ್ಲಿಸಬೇಕು. ಆದರೆ ಆರ್ಟಿಕಲ್ 190ರ ಪ್ರಕಾರ ಖುದ್ದು ಹಾಜರಾಗದೆ ರಾಜೀನಾಮೆ ನೀಡಿದರೆ ಅದು ಅನ್ವಯವಾಗುವುದಿಲ್ಲ. ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಶಾಸಕರು ರಾಜೀನಾಮೆಯ ನಾಟಕವಾಡುತ್ತಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿ ರಂಜನ್ ಗೋಗಯ್ ಅವರು ರಾಜೀನಾಮೆ ಅಂಗೀಕಾರ ತಡಮಾಡಲು ಕಾರಣವೇನು ? ಎಂದು ಪ್ರಶ್ನಿಸಿದ್ದು, ಜುಲೈ 11ರಂದು 15 ಶಾಸಕರ ಪೈಕಿ 11 ಶಾಸಕರು ಖುದ್ದಾಗಿ ಸ್ಪೀಕರ್ ಅವರನ್ನು ಭೇಟಿಯಾಗಿ ರಾಜೀನಾಮೆಯನ್ನು ಸಲ್ಲಿಸಿದರು. ಉಳಿದ ನಾಲ್ಕು ಶಾಸಕರು ಇದುವರೆಗೂ ಬಂದಿಲ್ಲ. ಜುಲೈ 6ರಂದು ಮೊದಲು ಶಾಸಕರು ರಾಜೀನಾಮೆ ನೀಡಲು ಹೋದಾಗ ಸ್ಪೀಕರ್ ಅವರು ಕಚೇರಿಯಲ್ಲಿ ಇರಲಿಲ್ಲ. ಅಲ್ಲದೇ ಸ್ಪೀಕರ್ ಅವರ ಬಳಿ ಸಮಯವೂ ಕೇಳಿರಲಿಲ್ಲ. ಮೊದಲು ನೀಡಿದ್ದ ರಾಜೀನಾಮೆ ಕ್ರಮಬದ್ಧವಾಗಿರಲಿಲ್ಲ. ಬಳಿಕ ಸಲ್ಲಿಸಿದ ರಾಜೀನಾಮೆ ಕ್ರಮಬದ್ಧವಾಗಿದೆ. ಫೆಬ್ರವರಿಯಲ್ಲೇ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರ ಅನರ್ಹತೆ ಪ್ರಕ್ರಿಯೆ ಆರಂಭವಾಗಿದೆ. ಅನರ್ಹತೆ ಪ್ರಕ್ರಿಯೆ ವಿಚಾರಣೆಯಲ್ಲಿರುವಾಗ ರಾಜೀನಾಮೆ ನೀಡುವುದು ಹೇಗೆ ಸಾಧ್ಯ? ಹಲವು ಅನರ್ಹತೆ ಪ್ರಕರಣಗಳನ್ನು ಪರಶೀಲಿಸಿ ತೀರ್ಪು ನೀಡಬೇಕಾಗಿದೆ. ಹೀಗಾಗಿ ರಾಜೀನಾಮೆ ಪ್ರಕ್ರಯೆ ತಡವಾಗುತ್ತಿದೆ.
ನಾನು ಬಹಳ ಗಂಭೀರವಾಗಿ ಶಾಸಕರು ಅನರ್ಹರಾಗುತ್ತಾರೆ ಎಂದು ಹೇಳುತ್ತೇನೆ. ಇಂದಲ್ಲಾ ನಾಳೆ ಶಾಸಕರ ಅನರ್ಹತೆ ಪ್ರಕ್ರಿಯೆ ಆಗಲೇಬೇಕು. ಅನರ್ಹತೆ ತಪ್ಪಿಸಿಕೊಳ್ಳಲು ರಾಜೀನಾಮೆ ಮಾರ್ಗ ಆಗಬಾರದು. ನಾಳೆ ಶಾಸಕರ ರಾಜೀನಾಮೆ ಹಾಗೂ ಅನರ್ಹತೆ ಪ್ರಕರಣವನ್ನು ಸ್ಪೀಕರ್ ಅವರು ಇತ್ಯರ್ಥ ಮಾಡುತ್ತಾರೆ. ಈ ಹಿಂದೆ ನೀಡಿದ್ದ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶ ವಾಪಸ್ ಪಡೆಯಿರಿ. ಶಾಸಕರ ರಾಜೀನಾಮೆ ಅಂಗೀಕರಿಸುವಂತೆ ಗಡುವು ನೀಡುವಂತಿಲ್ಲ. ಸ್ಪೀಕರ್ ಅವರ ಕಾರ್ಯವೈಖರಿಯಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡುವಂತಿಲ್ಲ. ರಾಜೀನಾಮೆ ವಿಚಾರದಲ್ಲಿ ಬಿಜೆಪಿ ನಾಯಕರ ಪಾತ್ರ ಇದೆ. ಬಿಎಸ್ ಯಡಿಯೂರಪ್ಪ ಆಪ್ತ ಸಂತೋಷ್, ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ್ ಹೆಸರನ್ನು ಪ್ರಸ್ತಾಪಿಸಿ, ರಾಜೀನಾಮೆ ನೀಡಿರುವ ಶಾಸಕರು ಬಿಜೆಪಿ ನಾಯಕರೊಂದಿಗೆ ಒಡನಾಟ ಹೊಂದಿದ್ದಾರೆ ಎಂದು ಸಿಂಘ್ವಿ ವಾದಿಸಿದರು.